Spread the love

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿಗಳ ಮಧ್ಯೆ ಸಿಲುಕಿ ಕಾರೊಂದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರವಾಸಕ್ಕೆಂದು ಬಂದಿದ್ದ ಮಹಾರಾಷ್ಟ್ರದ ಪುಣೆಯ ತಾಯಿ ಹಾಗೂ ಮಗಳು ದುರ್ಮರಣಕ್ಕೀಡಾಗಿದ್ದಾರೆ. 

ಪುಣೆಯ ಹಡಪ್ಸರ್‌ನ ತ್ರಿವೇಣಿನಗರದ ನಿವಾಸಿಗಳಾದ 59 ವರ್ಷದ ಶರ್ಮಿಳಾ ರಾಜನ್ ಕುಲ್ತೆ ಹಾಗೂ ಅವರ 32 ವರ್ಷದ ಮಗಳು ಮೃಣ್ಮಯಿ ರಾಜನ್ ಕುಲ್ತೆ ಮೃತಪಟ್ಟ ದುರ್ದೈವಿಗಳು. ಕಾರು ಚಲಾಯಿಸುತ್ತಿದ್ದ ಹೊಸಪೇಟೆ ಮೂಲದ 55 ವರ್ಷದ ಚಾಲಕ ಆಲಂಬಾಷಾ ಅವರು ಈ ಘೋರ ದುರಂತದಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊಸಪೇಟೆಯಿಂದ KA-35/D-8298 ನಂಬರಿನ ಕಾರನ್ನು ಬಾಡಿಗೆಗೆ ಪಡೆದಿದ್ದ ತಾಯಿ-ಮಗಳು, ಬಾದಾಮಿಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಅಲ್ಲಿಂದ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಭಾನುವಾರ(ಸೆ.06) ಸಂಜೆ 07-00 ರಿಂದ 07-30 ಗಂಟೆಯ ಸುಮಾರಿಗೆ ಕಾರು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಿ ತಲುಪಿದ್ದಾಗ, ಯಲ್ಲಾಪುರದಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಧಾವಿಸಿ ಬಂದ KA-01/AN-1281 ನಂಬರಿನ ಲಾರಿಯು ಕಾರಿಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. 

ಡಿಕ್ಕಿಯ ರಭಸಕ್ಕೆ ಕಾರು ಮುಂದಕ್ಕೆ ನುಗ್ಗಿ, ತಮ್ಮ ಮುಂದೆ ಚಲಿಸುತ್ತಿದ್ದ MH-09/FL-8699 ನಂಬರಿನ ಮತ್ತೊಂದು ಲಾರಿಗೆ ಅಪ್ಪಳಿಸಿ ಎರಡು ಬೃಹತ್ ವಾಹನಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ಈ ಭೀಕರ ಸರಣಿ ಅಪಘಾತದ ವೇಳೆ ಸಮೀಪದಲ್ಲಿದ್ದ ಮತ್ತೊಂದು ಕಾರಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ತಾಯಿ ಹಾಗೂ ಮಗಳು ತೀವ್ರ ರಕ್ತಸ್ರಾವವಾಗಿ ಪ್ರಜ್ಞಾಹೀನರಾಗಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಗಾಯಗೊಂಡ ಚಾಲಕ ಹಾಗೂ ಇಬ್ಬರು ಪ್ರಯಾಣಿಕರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಪ್ರಯಾಣಿಕರ ದೇಹ ತಪಾಸಣೆ ನಡೆಸಿದ ವೈದ್ಯರು, ತಾಯಿ-ಮಗಳು ಇಬ್ಬರೂ ಆಸ್ಪತ್ರೆಗೆ ತರುವ ಮಾರ್ಗಮಧ್ಯೆಯೇ ಮೃ*ತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಕಾರು ಚಾಲಕ ಆಲಂಬಾಷಾ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ BNS-2023 ಕಾಯ್ದೆಯ ಕಲಂ 281, 125(2), ಹಾಗೂ 106(1) ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *