Spread the love

​ಅಂಕೋಲಾ: ತಾಲೂಕಿನ ಬೊಗ್ರಿಬೈಲ್ ಗ್ರಾಮದ ಸರ್ವೆ ನಂ: 79/ಅ4 ರಲ್ಲಿದ್ದ 01 ಎಕರೆ 14 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿ ವಂಚಿಸಿದ ಜಾಲವನ್ನು ಅಂಕೋಲಾ ಪೊಲೀಸರು ಭೇದಿಸಿದ್ದಾರೆ.

ಪಿರ್ಯಾದಿದಾರರ ಕುಟುಂಬಕ್ಕೆ ಸೇರಿದ ಈ ಜಮೀನನ್ನು, ಅಂಕೋಲಾದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಪಿರ್ಯಾದಿ ಮತ್ತು ಅವರ ಸಹೋದರರೇ ತಾವೆಂದು ಬಿಂಬಿಸಿ, ನಕಲಿ ವ್ಯಕ್ತಿಗಳನ್ನು ನಿಲ್ಲಿಸಿ, ನಕಲಿ ಸಹಿ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಲಾಗಿತ್ತು.

ಈ ವಂಚನೆ ಕುರಿತು ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4), 319(2), 335, 336(2), 337, 340(1), 340(2) ಸಹಿತ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

​ಸಿಸಿಟಿವಿ ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ; ಐವರು ಆರೋಪಿಗಳ ಸೆರೆ

​ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕಾರವಾರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ (DySP) ಎಸ್.ವಿ. ಗಿರೀಶ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ.

ಪ್ರಕರಣದ ಪ್ರಮುಖ ಆರೋಪಿ ಬಾಳೆಗುಳಿಯ ಮಂಜುನಾಥ ಆನಂದು ಗೌಡ, ಕೃತ್ಯಕ್ಕೆ ಸಹಕರಿಸಿದ ಅಂಕೋಲಾ ಉಪ ನೊಂದಣಾಧಿಕಾರಿಗಳ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಶಂಕರ ರಾಮದಾಸ ಅಣೇಕರ, ಕೃಷ್ಣಾಪುರದ ಚೆನ್ನಪ್ಪ ಅಲಿಯಾಸ್ ರವಿ ಜಟ್ಟಿ ನಾಯ್ಕ, ಬೆಳಸೆಯ ದರ್ಶನ ನಾರಾಯನ ಗೌಡ ಹಾಗೂ ಯಂಕು ಹುಲಿಯಾ ಗೌಡ ಎಂಬ ಐವರನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದು, ಅಂಕೋಲಾದ ಜೆಎಂಎಫ್‌ಸಿ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

​ತನಿಖಾ ತಂಡದ ಕರ್ತವ್ಯಕ್ಕೆ ಇಲಾಖೆ ಶ್ಲಾಘನೆ

​ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತನಿಖಾಧಿಕಾರಿ ಎಸ್.ವಿ. ಗಿರೀಶ್ ಅವರ ನೇತೃತ್ವದಲ್ಲಿ ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್‌ಶಫಿ ಶೇಖ್, ಮಹಾದೇವ ಸಿದ್ದಿ, ಗಿರೀಶ ಲಮಾಣಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಯಶಸ್ವಿ ಕಾರ್ಯಾಚರಣೆ ನಡೆಸಿದ ಅಂಕೋಲಾ ಠಾಣೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *