ಮುಂಡಗೋಡ: ತಾಲೂಕಿನ ಗ್ರಾಮಗಳಿಂದ ನಾಪತ್ತೆಯಾಗಿದ್ದ ಯುವಕ ಹಾಗೂ ಯುವತಿಯೊಬ್ಬರು ಮಂಗಳವಾರ ರಾತ್ರಿ ದಿಢೀರನೆ ಪೊಲೀಸ್ ಠಾಣೆಗೆ ಹಾಜರಾಗಿದ್ದು, ತಾವು ಕಾನೂನು ಪ್ರಕಾರ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಈ ಹಿಂದಷ್ಟೇ ಇವರಿಬ್ಬರು ಕಾಣೆಯಾಗಿರುವ ಕುರಿತು ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಯುವಕ ಹಾಗೂ ಯುವತಿ ಠಾಣೆಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳ ಪೋಷಕರು ಠಾಣೆಯ ಬಳಿ ಜಮಾಯಿಸಿದ್ದರು. ಈ ವೇಳೆ ಅವರಿಬ್ಬರು ಈಗಾಗಲೇ ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ವಿಚಾರ ತಿಳಿದು ಆಕ್ರೋಶಗೊಂಡ ಪೋಷಕರ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪೊಲೀಸ್ ಠಾಣೆಯ ಆವರಣದಲ್ಲಿಯೇ ಎರಡೂ ಕಡೆಯ ಪೋಷಕರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಪರಸ್ಪರ ತಳ್ಳಾಟ, ನುಕಾಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆಗಳು ನಡೆದು ಠಾಣೆಯ ಆವರಣದಲ್ಲಿ ಕೆಲಕಾಲ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಠಾಣಾ ಆವರಣದಲ್ಲಿಯೇ ಪೋಷಕರು ಜಗಳವಾಡುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಗ್ರಾಮಸ್ಥರು ಹಾಗೂ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜಗಳ ಬಿಡಿಸಲು ಹರಸಾಹಸ ಪಡಬೇಕಾಯಿತು.
ತೀವ್ರ ಆಕ್ರೋಶಗೊಂಡಿದ್ದ ಪೋಷಕರು ಮತ್ತೆ ಮತ್ತೆ ಜಗಳ ಮುಂದುವರಿಸಲು ಯತ್ನಿಸಿದ್ದು, ಕೊನೆಗೆ ಪೊಲೀಸರು ಹಾಗೂ ಗ್ರಾಮಸ್ಥರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಕುರಿತು ಮುಂಡಗೋಡ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
