ಭಟ್ಕಳ: ಜಿಲ್ಲೆಯ ಭಟ್ಕಳ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಓ.ಸಿ. ಮಟಕಾ ಜುಗಾರಾಟದ ಅಡ್ಡೆಗಳ ಮೇಲೆ ಪೊಲೀಸರು ಸರಣಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಬ್ಬತ್ತಿಯ ಹಡೀಲ್ ನಿವಾಸಿ ಪುಂಡಲೀಕ ಈರಪ್ಪ ನಾಯ್ಕ (42) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು 1 ರೂಪಾಯಿಗೆ 80 ರೂಪಾಯಿ ಕೊಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಆಡಿಸುತ್ತಿದ್ದ. ಈತನಿಂದ 210 ರೂಪಾಯಿ ನಗದು, ಮಟಕಾ ಚೀಟಿ ಹಾಗೂ ಪೆನ್ ಜಪ್ತಿ ಮಾಡಲಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ 4 ಪ್ರಕರಣಗಳು ದಾಖಲಾಗಿವೆ. ಪಿಎಸ್ಐ ನವೀನ ಎಸ್. ನಾಯ್ಕ ಅವರು ನಡೆಸಿದ ದಾಳಿಯಲ್ಲಿ ತಲಾಂಧದ ಬೀಡಾ ವ್ಯಾಪಾರಿ ನಾಗರಾಜ ನಾರಾಯಣ ನಾಯ್ಕ (34) ಎಂಬಾತನನ್ನು ಬಂಧಿಸಿ 510 ರೂಪಾಯಿ ಹಾಗೂ ಮಟಕಾ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ, ಪಿಎಸ್ಐ ಸೋಮರಾಜ ರಾಠೋಡ ನೇತೃತ್ವದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂಡ ಶಿರಾಲಿಯ ಪಾನ್‌ಶಾಪ್ ವ್ಯಾಪಾರಿ ಉದಯ ನಾಗಪ್ಪ ನಾಯ್ಕ (32) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 520 ರೂಪಾಯಿ ನಗದು ವಶಪಡಿಸಿಕೊಂಡು ಕೇಸ್ ದಾಖಲಿಸಿಕೊಳ್ಳಲಾಗಿದೆ.
ಶಹರ ಠಾಣಾ ವ್ಯಾಪ್ತಿಯಲ್ಲೇ ಪಿಎಸ್ಐ ರವಿ ಗಾಂಜೇಕರ್ ಅವರು ಜಾಲಿಯ ತಗ್ಗರಗೋಡದಲ್ಲಿ ದಾಳಿ ನಡೆಸಿ, ಪಾನ್‌ಶಾಪ್ ಇಟ್ಟುಕೊಂಡು ಮಟಕಾ ಆಡಿಸುತ್ತಿದ್ದ ಮಂಜುನಾಥ ನಾರಾಯಣ ನಾಯ್ಕ (40) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 480 ರೂಪಾಯಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಪಿಎಸ್ಐ ತಿಮ್ಮಪ್ಪ ಎಸ್. ಅವರ ತಂಡವು ಮಾವಿನಕುರ್ವೆಯ ಬೆಳ್ನೆ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಟಕಾ ಜುಗಾರಾಟ ನಡೆಸುತ್ತಿದ್ದ ಬೀಡಾ ವ್ಯಾಪಾರಿ ಪ್ರಮೋದ ಗೋಯ್ದ ನಾಯ್ಕ (34) ಎಂಬಾತನನ್ನು ಸೆರೆಹಿಡಿದಿದೆ. ಈತನಿಂದ 500 ರೂಪಾಯಿ ನಗದು ಮತ್ತು ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಾಗಿದೆ. ಬಂಧಿತ ಎಲ್ಲಾ 5 ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3) ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ.
