ಕಾರವಾರ: ನಿಸ್ವಾರ್ಥವಾಗಿ ಮಾಡುವ ಸೇವೆಯಿಂದ ದೊರೆಯುವಂತಹ ಅತ್ಯುನ್ನತ ಸಂತೃಪ್ತಿಯು ನೂರು, ಇನ್ನೂರು ಕೋಟಿ ರೂಪಾಯಿಗಳ ಬೃಹತ್ ವ್ಯವಹಾರ ನಡೆಸಿದರೂ ಸಿಗುವುದಿಲ್ಲ. ಯಾವುದೇ ರೀತಿಯ ಪ್ರತಿಫಲದ ನಿರೀಕ್ಷೆಯಿಲ್ಲದೆ ಧರ್ಮ ಹಾಗೂ ಸಮಾಜಕ್ಕಾಗಿ ಮಾಡುವ ನಿಸ್ವಾರ್ಥ ಸೇವೆಯೇ ಮನುಷ್ಯನ ನಿಜವಾದ ಸಂಪತ್ತು ಎಂದು ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಪ್ರತಿಪಾದಿಸಿದ್ದಾರೆ.
ಗೋವಾದ ಪರ್ತಗಾಳಿಯಲ್ಲಿ ಭಕ್ತಿಭಾವದಿಂದ ಆಯೋಜಿಸಲಾಗಿದ್ದ ಚಾತುರ್ಮಾಸ ವ್ರತದ ಸಮಾರೋಪದ ಧರ್ಮಸಭೆಯಲ್ಲಿ ನೆರೆದಿದ್ದ ಅಪಾರ ಭಕ್ತಸಮೂಹಕ್ಕೆ ಅವರು ಆಶೀರ್ವಚನ ನೀಡಿದರು. ಈ ಬಾರಿಯ ಚಾತುರ್ಮಾಸದಲ್ಲಿ ಹಗಲಿರುಳು ಶ್ರಮಿಸಿದ 350 ಕ್ಕೂ ಅಧಿಕ ರಾಮಸೇವಕರು ಹಾಗೂ ರಾಮಸೇವಿಕೆಯರ ಅದ್ಭುತ ಸಮರ್ಪಣಾ ಭಾವವನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದರು.
ಚಾತುರ್ಮಾಸ ಸಮಿತಿ ಅಧ್ಯಕ್ಷ ಅನಿಲ್ ಪೈ ಅವರ ಸೇವಾ ನಿಷ್ಠೆಯನ್ನು ವಿಶೇಷವಾಗಿ ಉಲ್ಲೇಖಿಸಿದ ಸ್ವಾಮೀಜಿಯವರು, ಜವಾಬ್ದಾರಿ ವಹಿಸಿಕೊಂಡ ದಿನದಿಂದ ತಮ್ಮೆಲ್ಲಾ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಬದಿಗಿಟ್ಟು ಚಾತುರ್ಮಾಸದ ಸೇವೆಗೆ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ ಎಂದು ಪ್ರಶಂಸಿದರು.
ಪ್ರತಿದಿನ ಬೆಳಗಿನ ನಿರ್ಮಾಲ್ಯದಿಂದ ಹಿಡಿದು ರಾತ್ರಿ ಪೂಜೆಯವರೆಗೆ ಮಠದಲ್ಲೇ ಉಳಿದು ಸೇವೆ ಸಲ್ಲಿಸಿದ ಅವರು, ಕಾರ್ಯಕ್ರಮಗಳ ಅಚ್ಚುಕಟ್ಟು ವ್ಯವಸ್ಥೆ, ಭಕ್ತರ ನಿರ್ವಹಣೆ ಹಾಗೂ ವಿವಿಧ ಸಮಿತಿಗಳ ನಡುವಿನ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಾದಪೂಜೆ ಸಂದರ್ಭದಲ್ಲಿ ನೂರಾರು ಭಕ್ತರು ಆಗಮಿಸಿದಾಗ ಗಂಟೆಗಟ್ಟಲೆ ಅಲ್ಲೇ ಕುಳಿತು ವ್ಯವಸ್ಥೆ ನೋಡಿಕೊಂಡಿದ್ದಾರೆ ಹಾಗೂ ತಮ್ಮ ಸ್ವಂತ ಖರ್ಚಿನ ಬಗ್ಗೆಯೂ ಲೆಕ್ಕಿಸದೆ ಸೇವೆ ಸಲ್ಲಿಸಿರುವ ಅವರ ಸಮರ್ಪಣಾ ಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ರೀಗಳು ಕೊಂಡಾಡಿದರು.
ಚಾತುರ್ಮಾಸದ ವ್ಯವಸ್ಥೆಯನ್ನು ಚದುರಂಗ (ಚೆಸ್) ಆಟಕ್ಕೆ ಹೋಲಿಸಿದ ಸ್ವಾಮೀಜಿಯವರು, ಅತ್ಯುನ್ನತ ಅಧಿಕಾರ ರಾಜನಿಗೆ ಸೇರಿದ್ದರೂ ಅಲ್ಲಿ ರಾಣಿ, ಮಂತ್ರಿ, ಸೇನಾಧಿಪತಿ ಹಾಗೂ ಸೈನಿಕರ ಕಾರ್ಯಗಳಿಗೆ ಹೆಚ್ಚಿನ ಮಹತ್ವವಿರುತ್ತದೆ ಎಂದರು. ಅವಕಾಶ ಬಂದಾಗ ಮಾತ್ರ ರಾಜ ಕದಲುತ್ತಾನೆ, ಇಲ್ಲಿ ರಾಜರ ಸ್ಥಾನದಲ್ಲಿ ನಾವಿದ್ದರೆ ಉಳಿದವರ ಸ್ಥಾನದಲ್ಲಿ ಚಾತುರ್ಮಾಸ ಸಮಿತಿಯು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ ಎಂದು ವಿವರಿಸಿದರು.
ಧಾರ್ಮಿಕ ಸಮನ್ವಯ, ಕಚೇರಿ ಸೇವೆ, ಅನ್ನದಾನ ಸೇರಿದಂತೆ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಹಾಲು, ದವಸ-ಧಾನ್ಯ ಸೇರಿದಂತೆ ವಿವಿಧ ರೀತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಸೇವೆಯೇ ಗೌರವ ಹಾಗೂ ಆಶೀರ್ವಾದ ಪಡೆಯುವ ಮಾರ್ಗವಾಗಿದ್ದು, ಈ ಯಶಸ್ಸಿನಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಪಾತ್ರವೂ ಇದೆ ಎಂದು ಅವರು ಹೇಳಿದರು.
ಈ ಭವ್ಯ ಸಮಾರಂಭದಲ್ಲಿ ಚಾತುರ್ಮಾಸ ಸಮಿತಿ ಅಧ್ಯಕ್ಷ ಅನಿಲ್ ಪೈ, ಸೆಂಟರ್ ಕಮಿಟಿ ಉಪಾಧ್ಯಕ್ಷ ಆರ್.ಆರ್. ಕಾಮತ್, ಶಿವಾನಂದ ಸಾಲಗಾಂವಕರ್, ಬೆಂಗಳೂರಿನ ರಾಮಚಂದ್ರ ಶ್ಯಾನಭಾಗ್, ದಿನೇಶ್ ಆರ್. ಪೈ, ವಿಜಯ ಸರ್‌ದೇಸಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
