Spread the love

ಕಾರವಾರ: ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಚಾತುರ್ಮಾಸ ವ್ರತದ ಅಂಗವಾಗಿ ಮೃತ್ತಿಕಾ ವಿಸರ್ಜನೆ ಕಾರ್ಯಕ್ರಮವು ಶನಿವಾರ ಕುಶಾವತಿ ನದಿ ತೀರದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ಸಂಪನ್ನಗೊಂಡಿತು. 

ಆಗಸ್ಟ್ 5 ರಂದು ಶ್ರೀಗಳು ಚಾತುರ್ಮಾಸ ವ್ರತವನ್ನು ಕೈಗೊಂಡಿದ್ದರು. ಸತತ 53 ದಿನಗಳ ಕಠಿಣ ವ್ರತಾಚರಣೆಯ ಬಳಿಕ ಶನಿವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿ ಮೃತ್ತಿಕಾ ವಿಸರ್ಜನೆ ಮಾಡಲಾಯಿತು. ಈ ಬಾರಿಯ ವ್ರತದ ಅವಧಿಯಲ್ಲಿ ನಾಗರ ಪಂಚಮಿ, ಗಣೇಶ ಚತುರ್ಥಿ, ಅನಂತನೋಪಿ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬಗಳನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 120 ಭಜನಾ ಮಂಡಳಿಗಳು ಪ್ರತಿದಿನ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಭಕ್ತರಲ್ಲಿ ವಿಶೇಷ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಾಣ ಮಾಡಿದ್ದವು. ಇದು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ 10 ನೇ ಚಾತುರ್ಮಾಸ ವ್ರತವಾಗಿದ್ದು, ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದುಬಂದಿತ್ತು. ಮೃತ್ತಿಕಾ ವಿಸರ್ಜನೆಯ ಬಳಿಕ ಆಯೋಜಿಸಲಾಗಿದ್ದ ಧರ್ಮಸಭೆಯಲ್ಲಿ ಚಾತುರ್ಮಾಸ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳು ಹಾಗೂ ವಿವಿಧ ರೀತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚಾತುರ್ಮಾಸ ವ್ರತದ ಸಮಾರೋಪದ ಅಂಗವಾಗಿ ಸೆಪ್ಟೆಂಬರ್ 27 ರಂದು ಭವ್ಯ ದಿಗ್ವಿಜಯ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಮೆರವಣಿಗೆ ಜರುಗಲಿದ್ದು, ಕಲಾತ್ಮಕ ಹಾಗೂ ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿವೆ. ಶ್ರೀರಾಮನ ಕಂಚಿನ ಪ್ರತಿಮೆ ಇರುವ ಮಾರ್ಗದ ಮೂಲಕ ಸ್ವಾಮೀಜಿಯವರ ದಿವ್ಯ ರಥವು ಮಾರುತಿ ಗುಡಿಯವರೆಗೆ ಸಾಗಲಿದ್ದು, ಅಲ್ಲಿ ಗೋವಾದ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. 

ಕಾಣಕೋಣದ 11 ಮಂದಿರಗಳ ವತಿಯಿಂದ 11 ವಿಶೇಷ ಸ್ವಾಗತ ದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರತಿಯೊಂದು ದ್ವಾರದ ಬಳಿಯೂ ಶ್ರೀಗಳ ರಥೋತ್ಸವ ನಿಂತು ಭಕ್ತರಿಗೆ ದರ್ಶನ ನೀಡಲಿದೆ. ಗೋವಾದ ವೈವಿಧ್ಯಮಯ ಕಲೆ, ಸಂಸ್ಕೃತಿ ಮತ್ತು ವೈಭವವನ್ನು ಬಿಂಬಿಸುವ ಈ ಐತಿಹಾಸಿಕ ಮಹೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಹಾಗೂ ರಾಮದೇವ ವೀರವಿಠ್ಠಲ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ಚಾತುರ್ಮಾಸ ಸಮಿತಿ ಅಧ್ಯಕ್ಷ ಅನಿಲ ಪೈ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *