ಕಾರವಾರ: ತಾಲೂಕಿನ ಹಳಗಾ ಗ್ರಾಮದ ಆರಾಧ್ಯ ದೈವ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ವತಿಯಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಶುಕ್ರವಾರ ‘ಅಷ್ಟಮಂಗಲ ಪ್ರಶ್ನೆ’ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಪರಂಪರೆ ಹಾಗೂ ಪೂಜಾ ಪದ್ಧತಿಗಳ ಶೋಧ:
ಸುಮಾರು 300 ರಿಂದ 400 ವರ್ಷಗಳ ಭವ್ಯ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಿವೆಯೇ, ಮರೆತುಹೋಗಿರುವ ಹಿಂದಿನ ಕಾಲದ ಪೂಜಾ ಪದ್ಧತಿಗಳು ಯಾವುವು ಮತ್ತು ಅವುಗಳನ್ನು ಮರಳಿ ಆಚರಣೆಗೆ ತರಬೇಕೇ ಎಂಬುದನ್ನು ಅರಿಯುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಮಾರ ನಾಯ್ಕ ನೇತೃತ್ವದಲ್ಲಿ ಊರಿನ ಹಿರಿಯರು ಹಾಗೂ ಭಕ್ತರೊಂದಿಗೆ ಚರ್ಚಿಸಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.
ಲೋಪದೋಷಗಳಿಗೆ ಪರಿಹಾರ ಸೂಚನೆ:
ಖ್ಯಾತ ಜ್ಯೋತಿಷಿ ನಾಗಾನಂದ ಭಟ್ ಅವರ ನೇತೃತ್ವದಲ್ಲಿ ಸತತ 4 ರಿಂದ 5 ಗಂಟೆಗಳ ಕಾಲ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯಿತು. ಈ ವೇಳೆ ದೇವಸ್ಥಾನದಲ್ಲಿನ ಕೆಲವು ಲೋಪದೋಷಗಳು ಹಾಗೂ ಧಾರ್ಮಿಕ ಆಚರಣೆಗಳ ವಿಚಾರಗಳು ಚರ್ಚೆಗೆ ಬಂದಿದ್ದು, ಇದಕ್ಕೆ ಸೂಕ್ತ ಪರಿಹಾರವಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಂತೆ ಜ್ಯೋತಿಷಿಗಳು ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
ದೇವಸ್ಥಾನದ ಹಿಂದಿನ ಸಂಪ್ರದಾಯಗಳಿಗೆ ಅನುಗುಣವಾಗಿ ಪೂಜಾ ಪದ್ಧತಿಗಳನ್ನು ಮುಂದುವರಿಸುವುದು, ದೇವಸ್ಥಾನದ ಭವಿಷ್ಯದ ನಿರ್ವಹಣೆ ಹಾಗೂ ಅಗತ್ಯ ಬದಲಾವಣೆಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ. ಅಲ್ಲದೆ, ದೇವಸ್ಥಾನದ 5 ಪರಿವಾರ ದೇವರುಗಳಿಗೆ ಸಂಬಂಧಿಸಿದ ವಿಚಾರಗಳು ಹಾಗೂ ಬಂಗಾರದ ವಿವರಗಳ ಬಗ್ಗೆಯೂ ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
