Spread the love

ಕಾರವಾರ: ರಾಷ್ಟ್ರೀಯ ಪ್ರಾಮುಖ್ಯತೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಅಗತ್ಯವಾದ ನಿರ್ಮಾಣ ಸಾಮಗ್ರಿಗಳ ಸಾಗಣೆಗೆ ಅನುಕೂಲವಾಗುವಂತೆ ಕೈಗಾ-ಕಾರವಾರ ರಾಜ್ಯ ಹೆದ್ದಾರಿ 06ರಲ್ಲಿ ಭಾರಿ ವಾಹನಗಳ ಸಂಚಾರದ ಮೇಲಿದ್ದ ನಿರ್ಬಂಧವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ.

ಷರತ್ತುಬದ್ಧ ಅನುಮತಿ ಹಾಗೂ ಜವಾಬ್ದಾರಿ: 

ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದರೂ, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಆಕ್ಸಲ್‌ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ಸಾಗಿಸುವ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ. ಈ ಮಿತಿಯನ್ನು ಮೀರದಂತೆ ವಾಹನಗಳು ಸಂಚರಿಸುವ ಜವಾಬ್ದಾರಿಯನ್ನು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ವಹಿಸಿಕೊಂಡಿದೆ. 2031-32ರ ವೇಳೆಗೆ 5 ಮತ್ತು 6ನೇ ಘಟಕಗಳ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಯೋಜನೆಗೆ ಅಗತ್ಯವಾದ ಸರಕುಗಳ ಸಾಗಣೆಗೆ ಈ ಹೆದ್ದಾರಿಯೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ.

ರಸ್ತೆ ದುರಸ್ತಿ ಮತ್ತು ಭವಿಷ್ಯದ ಕಾಮಗಾರಿ: 

ಹಿಂದೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿತ್ತು. ಇದೀಗ ಎನ್‌ಪಿಸಿಐಎಲ್ ರಸ್ತೆ ದುರಸ್ತಿಗೊಳಿಸಿದ ಬಳಿಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಕ್ಟೋಬರ್ 16ರಂದು ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಲಾಗಿದೆ.

ಸದ್ಯ ಹೆದ್ದಾರಿಯ ಕೆರವಡಿ-ಮಲ್ಲಾಪುರ ನಡುವಿನ ರಸ್ತೆ ಪುನರ್‌ನಿರ್ಮಾಣ ಮತ್ತು ವಿಸ್ತರಣಾ ಕಾಮಗಾರಿಯನ್ನು ಎನ್‌ಪಿಸಿಐಎಲ್ ಗುತ್ತಿಗೆ ನೀಡಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆಗೆ ಮತ್ತೆ ಯಾವುದೇ ದುರಸ್ತಿ ಅಗತ್ಯವಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಎನ್‌ಪಿಸಿಐಎಲ್ ಸಂಸ್ಥೆಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *