Spread the love

ಕಾರವಾರ: ಯಲ್ಲಾಪುರ ತಾಲೂಕಿನ ಉಪಳೇಶ್ವರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವನ್ಯಜೀವಿ ಉತ್ಪನ್ನಗಳು ಪತ್ತೆಯಾದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರ ಮತ್ತು ಇಡಗುಂದಿ ಅರಣ್ಯ ವಲಯದ ಅಧಿಕಾರಿಗಳನ್ನು ಅಮಾನತುಗೊಳಿಸಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ಮಾದೇವ ನಾಯ್ಕ ಆಗ್ರಹಿಸಿದ್ದಾರೆ.

ಶುಕ್ರವಾರ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್‌ನಲ್ಲಿ ಉಪಳೇಶ್ವರದಲ್ಲಿ ಅರಣ್ಯ ಸಂಚಾರಿ ಜಾಗೃತ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಕಾಡೆಮ್ಮೆ ಕೊಂಬುಗಳು, ಎರಡು ಹುಲಿ ಉಗುರುಗಳು, ಎರಡು ಹುಲಿ ಹಲ್ಲುಗಳು, 12 ಚಿರತೆ ಉಗುರುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳು ಪತ್ತೆಯಾಗಿವೆ. ವನ್ಯಜೀವಿ ಉತ್ಪನ್ನಗಳ ಸಾಗಾಟಕ್ಕೆ ಬಳಸಿದ್ದ ಬೈಕ್ ಮತ್ತು ಸ್ಕೂಟರ್ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಅರಣ್ಯ ಇಲಾಖೆಯ ಈ ಕಾರ್ಯಾಚರಣೆ ಅಭಿನಂದನೀಯ ಎಂದರು.

ಇಷ್ಟೊಂದು ವನ್ಯಜೀವಿ ಉತ್ಪನ್ನಗಳು ಬಂದಿದ್ದೆಲ್ಲಿಂದ?

ಇಷ್ಟೊಂದು ಪ್ರಮಾಣದ ವನ್ಯಜೀವಿ ಉತ್ಪನ್ನಗಳು ಒಂದೆರಡು ದಿನಗಳಲ್ಲಿ ಸಂಗ್ರಹವಾಗಲು ಸಾಧ್ಯವಿಲ್ಲ. ಹುಲಿ, ಕಾಡೆಮ್ಮೆ, ಚಿರತೆ ಹಾಗೂ ಪ್ಯಾಂಗೋಲಿನ್‌ಗಳು ಎಲ್ಲಿ ಬಲಿಯಾಗಿವೆ? ಅವುಗಳ ಚಿಪ್ಪು, ಕೊಂಬು, ಉಗುರು ಮತ್ತು ಹಲ್ಲುಗಳನ್ನು ಯಾರು ಸಂಗ್ರಹಿಸಿದ್ದಾರೆ? ಇವು ಹೊರರಾಜ್ಯ ಅಥವಾ ವಿದೇಶಗಳಿಂದ ಬಂದಿದ್ದರೆ ಅವುಗಳ ಮೂಲ ಯಾವುದು ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.

ಯಲ್ಲಾಪುರ ಮತ್ತು ಇಡಗುಂದಿ ಅರಣ್ಯ ವಲಯಗಳ ವ್ಯಾಪ್ತಿಯಲ್ಲೇ ವನ್ಯಜೀವಿಗಳು ಬಲಿಯಾಗಿವೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಈ ಅಕ್ರಮ ಸಂಗ್ರಹ ಮತ್ತು ಸಾಗಾಟದ ಹಿಂದೆ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ರೇಂಜ್ ಮಟ್ಟದ ಕೆಲವು ಅಧಿಕಾರಿಗಳವರೆಗೆ ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಗಂಭೀರ ಅನುಮಾನ ಮೂಡಿದೆ. ಅಧಿಕಾರಿಗಳ ಕೃಪಾಕಟಾಕ್ಷವಿಲ್ಲದೆ ಇಷ್ಟೊಂದು ಪ್ರಮಾಣದ ವನ್ಯಜೀವಿ ಉತ್ಪನ್ನಗಳ ಸಂಗ್ರಹ ಮತ್ತು ಸಾಗಾಟ ಸಾಧ್ಯವೇ ಎಂಬುದೂ ತನಿಖೆಯಿಂದ ಬಹಿರಂಗವಾಗಬೇಕು ಎಂದರು.

ತನಿಖೆ ಆರೋಪಿಗಳ ಬಂಧನಕ್ಕೆ ಸೀಮಿತವಾಗಬಾರದು

ಪ್ರಕರಣದ ತನಿಖೆ ಕೇವಲ ಆರೋಪಿಗಳ ಬಂಧನಕ್ಕೆ ಸೀಮಿತವಾಗಬಾರದು. ವನ್ಯಜೀವಿಗಳ ಬೇಟೆ, ಹತ್ಯೆ, ಉತ್ಪನ್ನಗಳ ಸಂಗ್ರಹ ಮತ್ತು ಸಾಗಾಟದ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಬೇಕು. ಈ ಹಿನ್ನೆಲೆಯಲ್ಲಿ ಯಲ್ಲಾಪುರ ಮತ್ತು ಇಡಗುಂದಿ ಅರಣ್ಯ ವಲಯದ ಅಧಿಕಾರಿಗಳನ್ನು ಅಮಾನತುಗೊಳಿಸಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಚಿವರನ್ನು ಆಗ್ರಹಿಸಿದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವನ್ಯಜೀವಿ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರವೀಂದ್ರನಗರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ನಾಯ್ಕ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಗಡೆ, ಬಿಜೆಪಿ ರವೀಂದ್ರನಗರ ಬೂತ್ ಅಧ್ಯಕ್ಷ ಗಿರೀಶ್ ಬೋವಿ ಹಾಗೂ ಬೂತ್ ಕಾರ್ಯದರ್ಶಿ ಕಾರ್ತಿಕ್ ನಾಯ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *