ಯಲ್ಲಾಪುರ: ಯಲ್ಲಾಪುರ ವಲಯ ವ್ಯಾಪ್ತಿಯ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಬಳಿ ವನ್ಯಪ್ರಾಣಿಯನ್ನು ಬೇಟೆಯಾಡಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಂದೆ ಹಾಗೂ ಮಗನನ್ನು ಬಂಧಿಸಿದ್ದಾರೆ. ಸೋಮವಾರ(ಸೆ.28) ಹಳಬೈಲ್ ಶಾಖೆಯ ಅರಳಿಕೊಪ್ಪ ಗಸ್ತು ಬ್ಲಾಕ್ ವ್ಯಾಪ್ತಿಯಲ್ಲಿ ಈ ದಿಢೀರ್ ದಾಳಿ ನಡೆಸಲಾಗಿದ್ದು, ವನ್ಯಜೀವಿ ಬೇಟೆಕೋರರನ್ನು ಮಟ್ಟಹಾಕುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಎರಡು ಮೃತ ಉಡ ಹಾಗೂ ಮಾರಕಾಸ್ತ್ರಗಳ ಜಪ್ತಿ
ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಕಣ್ಣಿಗೇರಿ ಗ್ರಾಮದ ನಿವಾಸಿಗಳಾದ 55 ವರ್ಷದ ಇನಾಸ್ ಬಸ್ಥ್ಯಾಂವ್ ಸಿದ್ದಿ ಹಾಗೂ ಆತನ 27 ವರ್ಷದ ಮಗ ಪ್ರಕಾಶ್ ಇನಾಸ್ ಸಿದ್ದಿ ಎಂಬುವವರ ಮನೆಯಲ್ಲಿ ಬೇಟೆಯಾಡಿದ್ದ ವನ್ಯಜೀವಿಗಳು ಪತ್ತೆಯಾಗಿವೆ.
ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ‘ಬೆಂಗಾಲ್ ಮಾನಿಟರ್ ಲಿಜಾರ್ಡ್’ (Bengal Monitor Lizard) ಜಾತಿಗೆ ಸೇರಿದ ಮೃತಪಟ್ಟ ಎರಡು ಗಂಡು ಉಡಗಳು ಮನೆಯಲ್ಲಿರುವುದು ದೃಢಪಟ್ಟಿದೆ. ಇದರ ಜೊತೆಗೆ ಪ್ರಾಣಿಗಳ ಬೇಟೆಗೆ ಬಳಸಿದ್ದ ಎರಡು ಕತ್ತಿಗಳು ಹಾಗೂ ಒಂದು ಕೊಡಲಿಯನ್ನು ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು
ಅಕ್ರಮವಾಗಿ ಉಡಗಳನ್ನು ಬೇಟೆಯಾಡಿದ ಆರೋಪಿಗಳ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2(16), 9, 39(a) ಹಾಗೂ 50ರ ಅಡಿಯಲ್ಲಿ ಗಂಭೀರ ಮೊಕದ್ದಮೆ ದಾಖಲಿಸಲಾಗಿದ್ದು, ಇಬ್ಬರೂ ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ನೇತೃತ್ವದಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎಚ್. ನಾಯ್ಕ ಅವರ ಮಾರ್ಗದರ್ಶನದಲ್ಲಿ, ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಷ್ ಗಾಂವ್ಕರ್, ಶ್ರೀನಿವಾಸ್ ನಾಯ್ಕ ಸೇರಿದಂತೆ ಅರಣ್ಯ ಪಾಲಕರ ದೊಡ್ಡ ತಂಡವೇ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.
