Spread the love

ಕಾರವಾರ: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹೊರಿಸಿದ್ದು, ಇದು ತೀವ್ರ ಖಂಡನೀಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನರಿಗೆ ಬೆಲೆ ಏರಿಕೆಯ ಬರೆ ನಿರಂತರವಾಗಿ ಬೀಳುತ್ತಿದೆ. ಹಾಲಿನ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಒಂದರ ಹಿಂದೊಂದರಂತೆ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದೀಗ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ. 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಸರ್ಕಾರ, ಉಳಿದ ಪ್ರಯಾಣಿಕರ ಮೇಲೆ ದುಪ್ಪಟ್ಟು ದರದ ಹೊರೆ ಹಾಕಿದರೆ ಗ್ಯಾರಂಟಿಯ ಪ್ರಯೋಜನವೇನು? ಉಚಿತ ಪ್ರಯಾಣದ ಹೆಸರಿನಲ್ಲಿ ಪುರುಷರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ನಿತ್ಯ ಪ್ರಯಾಣಿಸುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ವೆಚ್ಚದ ನೆಪದಲ್ಲಿ ಜನರ ಮೇಲೆ ತೆರಿಗೆ ಹಾಗೂ ಬೆಲೆ ಏರಿಕೆಯ ಹೊರೆ ಹಾಕುವುದು ಸರಿಯಲ್ಲ. ಒಂದು ಕೈಯಲ್ಲಿ ಉಚಿತ ಸೌಲಭ್ಯ ನೀಡಿದಂತೆ ತೋರಿಸಿ, ಇನ್ನೊಂದು ಕೈಯಲ್ಲಿ ಜನರಿಂದಲೇ ಹೆಚ್ಚಿನ ಹಣ ವಸೂಲಿ ಮಾಡುವುದು ಜನಪರ ಆಡಳಿತದ ಲಕ್ಷಣವಲ್ಲ. ನಿತ್ಯ ಬಸ್‌ಗಳನ್ನೇ ಅವಲಂಬಿಸಿರುವ ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಭಾಗದ ಜನರಿಗೆ ಈ ದರ ಏರಿಕೆ ದೊಡ್ಡ ಹೊಡೆತ ನೀಡಲಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಾರಿಗೆ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ಬದುಕಿನ ವೆಚ್ಚ ಕಡಿಮೆ ಮಾಡುವ ಬದಲು, ಪ್ರತಿಯೊಂದು ಕ್ಷೇತ್ರದಲ್ಲೂ ದರ ಹೆಚ್ಚಿಸುತ್ತಿರುವ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹಿತವನ್ನು ಮರೆತಿದೆ. 

ರಾಜ್ಯ ಸರ್ಕಾರ ಕೂಡಲೇ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರವನ್ನು ಕೈಬಿಡಬೇಕು, ಇಲ್ಲವಾದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಆಡಳಿತಕ್ಕೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ ಎಂದು ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *