Spread the love

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಎರಡನೇ ವಿಕಿರಣ ರಕ್ಷಾಕವಚವನ್ನು (Radiation shield) ಕಾರವಾರ ನಗರದ ಮೂಲಕ ಯಶಸ್ವಿಯಾಗಿ ಸಾಗಿಸಲಾಯಿತು. ಸುಮಾರು 30 ಅಡಿಗೂ ಹೆಚ್ಚು ಎತ್ತರ ಹಾಗೂ ಬರೋಬ್ಬರಿ 120 ಟನ್ ತೂಕದ ಈ ಬೃಹತ್ ಯಂತ್ರವನ್ನು ವಿಶೇಷ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಮಲ್ಟಿ ಆಕ್ಸಲ್ ವಾಹನದ ಮೂಲಕ ಅತ್ಯಂತ ಎಚ್ಚರಿಕೆಯಿಂದ ಸಾಗಿಸುವ ಕಾರ್ಯ ನಡೆಯಿತು.

ಈ ಬೃಹತ್ ಯಂತ್ರದ ಸಾಗಣೆಗೆ ಅನುಕೂಲವಾಗುವಂತೆ ನಗರದ ವಿವಿಧೆಡೆ ರಸ್ತೆಗೆ ಅಡ್ಡಲಾಗಿದ್ದ ವಿದ್ಯುತ್ ತಂತಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಇದರಿಂದಾಗಿ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ವಿದ್ಯುತ್ ವ್ಯತ್ಯಯ ಎದುರಿಸುವಂತಾಯಿತು. 

ಇದರ ಜೊತೆಗೆ, ಬೃಹತ್ ಗಾತ್ರದ ವಾಹನವು ರಸ್ತೆಯಲ್ಲಿ ಅತ್ಯಂತ ನಿಧಾನವಾಗಿ ಸಂಚರಿಸಿದ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಭಾರಿ ಅಡಚಣೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು.

ಕಾರವಾರ ನಗರದ ರಸ್ತೆಗಳಲ್ಲಿ ಎರಡನೇಯ ಬಾರಿಗೆ ಈ ರೀತಿಯ ಬೃಹತ್ ಗಾತ್ರದ ಯಂತ್ರದ ಭಾಗವನ್ನು ವಿಶೇಷ ಮಲ್ಟಿ ಆಕ್ಸಲ್ ವಾಹನದ ಮೂಲಕ ಸಾಗಾಟ ಮಾಡಲಾಗುತ್ತಿದ್ದು, ಇದನ್ನು ಜನ ಕುತೂಹಲದಿಂದ ವೀಕ್ಷಿಸಿದರು. ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅಚ್ಚರಿಯಿಂದ ಯಂತ್ರದ ಸಾಗಾಟ ವೀಕ್ಷಿಸಿದ್ದಲ್ಲದೇ ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದುಕೊಂಡರು. 

ನಗರದಲ್ಲಿ ಬೃಹತ್ ಸರಕು ಸಾಗಾಟದ ಹಿನ್ನಲೆ ನಗರದ ವಿವಿಧೆಡೆ ಹಲವು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಭಾರೀ ವಾಹನಗಳಿಂದಾಗಿ ನಗರದ ಸವಿತಾ ವೃತ್ತದಿಂದ ಹಬ್ಬುಡಾಡ, ಬಾಂಡಿಶಿಟ್ಟಾ ರಸ್ತೆಯಲ್ಲಿ  ಟ್ರಾಫಿಕ್ ಸಮಸ್ಯೆ ಉಂಟಾಗಿ ಸಾರ್ವಜನಿಕರು ಅಡಚಣೆ ಎದುರಿಸುವಂತಾಯಿತು.

Leave a Reply

Your email address will not be published. Required fields are marked *