Spread the love

ಮುಂಡಗೋಡ: ಮನೆಯ ನಳದಲ್ಲಿ ನೀರು ತುಂಬಲು ಮೋಟಾರ್ ಸ್ವಿಚ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ 21 ವರ್ಷದ ವಿವಾಹಿತ ಯುವತಿಯೋರ್ವಳು ದಾರುಣವಾಗಿ ಸಾ*ವನ್ನಪ್ಪಿದ ಘಟನೆ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ಆಯಿಷಾ ಮಹಮ್ಮದಸಲೀಂ ಬೇಗ್ (21) ಮೃ*ತಪಟ್ಟ ದುರ್ದೈವಿ.

ಘಟನೆಯ ವಿವರ: ಬೆಳಿಗ್ಗೆ 7:30ರ ಸುಮಾರಿಗೆ ಮನೆಯ ಮುಂದಿನ ನಳದಲ್ಲಿ ನೀರು ಬಂದಾಗ, ಆಯಿಷಾ ಅವರು ನೀರು ತುಂಬಲು ನಳದ ಮುಂದೆ ಬಕೆಟ್ ಇಟ್ಟು ಅದರಲ್ಲಿ ನೀರೆತ್ತುವ ಮೋಟಾರ್ ಅಳವಡಿಸಿದ್ದರು. ಬಳಿಕ ಕರೆಂಟ್ ಸ್ವಿಚ್ ಹಾಕಲು ಮುಂದಾದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ತೀವ್ರವಾಗಿ ಶಾಕ್ ಹೊಡೆದಿದೆ. 

ವಿದ್ಯುತ್ ಸ್ಪರ್ಶದಿಂದ ಪ್ರಜ್ಞಾಹೀನಳಾಗಿ ಕುಸಿದುಬಿದ್ದ ಆಕೆಯನ್ನು ಕೂಡಲೇ ಪಾಳಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮುಂಡಗೋಡ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಆಕೆ ಮಾರ್ಗಮಧ್ಯೆಯೇ ಮೃ*ತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಈ ಘಟನೆ ಕುರಿತು ಮೃ*ತಳ ತಂದೆ, ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ನಾರಾಯಣಪುರ ನಿವಾಸಿ ಶಬ್ಬೀರಸಾಬ ಸುಲೇಮಾನಸಾಬ (55) ಅವರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗಳ ಸಾ*ವಿನಲ್ಲಿ ತಮಗೆ ಯಾವುದೇ ಸಂಶಯವಿಲ್ಲ ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದು, ತಮ್ಮೂರಿನಿಂದ ಬಂದು ಸಂಬಂಧಿಕರೊಂದಿಗೆ ಚರ್ಚಿಸಿ ದೂರು ನೀಡಿದ ಕಾರಣ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಹೊಸ ಕ್ರಿಮಿನಲ್ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS-2023) ಕಲಂ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಮೃ*ತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *