Spread the love

ದಾಂಡೇಲಿ: ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಉದ್ಯೋಗಿಯೊಬ್ಬರು (ಟೆಕ್ನಿಷಿಯನ್) ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಮೃ*ತಪಟ್ಟು, ಮತ್ತೋರ್ವ ಹಿರಿಯ ಅಧಿಕಾರಿ ಗಾಯಗೊಂಡಿರುವ ದಾರುಣ ಘಟನೆ ದಾಂಡೇಲಿ ತಾಲೂಕಿನಲ್ಲಿ ನಡೆದಿದೆ. 

ತಾಲೂಕಿನ ಬರ್ಚಿ – ಕರ್ಕಾ ರಸ್ತೆಯ ಬೇಡರ ಶಿರಗೂರು ಹತ್ತಿರ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಶುಕ್ರವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಮಹೇಶ ಶೇಖಪ್ಪ ತಳವಾರ (33) ಮೃ*ತಪಟ್ಟ ರೈಲ್ವೆ ತಾಂತ್ರಿಕ ಸಿಬ್ಬಂದಿ. ಗದಗ ರಾಜೀವ್ ಗಾಂಧಿನಗರದ ನಿವಾಸಿಯಾಗಿರುವ ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಅಭಿಯಂತರ (ಇಂಜಿನಿಯರ್) ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಗಾಯಗೊಂಡವರಾಗಿದ್ದಾರೆ. 

ಅಳ್ನಾವರ-ಅಂಬೇವಾಡಿ ಸೆಕ್ಷನ್‌ನ ಎಲ್‌ಸಿ ನಂ. 11 ರಲ್ಲಿ ಕರ್ಕಾ – ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಗಾಗಿ ತೆಗೆದು ಹಾಕಿದ್ದ ಮಣ್ಣು ಏಕಾಏಕಿ ಕುಸಿದು ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ಮಹೇಶ್ ಹಾಗೂ ಮಕ್ತುಂ ಹುಸೇನ್ ಅವರ ಮೇಲೆ ಬಿದ್ದಿದೆ. ಮಣ್ಣಿನಡಿ ಸಂಪೂರ್ಣವಾಗಿ ಸಿಲುಕಿದ ಮಹೇಶ್ ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ವಿಷಯ ತಿಳಿದ ತಕ್ಷಣ ಸಿಪಿಐ ಶಿವಾನಂದ ಅಂಬಿಗೇರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃ*ತದೇಹವನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *