Spread the love

ಕಾರವಾರ: ನಗರದ ಕಾಳಿ ನದಿ ಸೇತುವೆ ಮೇಲೆ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜಸ್ಥಾನ ಮೂಲದ 23 ವರ್ಷದ ಯುವಕ ಮೃ*ತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನವೆಂಬರ್ 2ರಂದು ಸಂಜೆ ನಡೆದಿದೆ.

ಮೃ*ತನನ್ನು ರಾಜಸ್ಥಾನದ ಜೋಧಪುರ ಮೂಲದ ಅಶೋಕ ಹೇಮಾರಾಮ್ (23) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಚಿರಾಗ್ ಕಿರಣ ಮಾಸೂರಕರ (21), ಗಣೇಶ ಲಮಾಣಿ ಹಾಗೂ ಲಕ್ಷ್ಮಣ ಅರ್ಜುನ ರಾಮ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪೊಲೀಸ್ ದೂರಿನ ಪ್ರಕಾರ, ಚಿರಾಗ್ ಮಾಸೂರಕರ ಅವರು ಗಣೇಶ ಲಮಾಣಿ ಅವರೊಂದಿಗೆ ಕೆಎ-68/ಯು-1295 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಎನ್‌ಎಸ್ ಬೈಕ್‌ನಲ್ಲಿ ಬೈತಖೋಲ್‌ನಿಂದ ಸದಾಶಿವಗಡದ ಕಡೆಗೆ ತೆರಳುತ್ತಿದ್ದರು. ಕಾಳಿ ನದಿ ಸೇತುವೆ ಮೇಲಿದ್ದಾಗ ಬೈಕ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ವಿಚಿತ್ರ ಶಬ್ದ ಕೇಳಿಬಂದಿದೆ. ಹೀಗಾಗಿ ಗಣೇಶ ಬೈಕ್ ನಿಲ್ಲಿಸಿ, ಅದನ್ನು ರಸ್ತೆಯ ಬದಿಗೆ ತೆಗೆದುಕೊಂಡು ಹೋಗಲು ಚಿರಾಗ್ ಅವರಿಗೆ ಹಿಂದಿನಿಂದ ತಳ್ಳುವಂತೆ ಹೇಳಿದ್ದಾರೆ.

ಈ ವೇಳೆ ಸದಾಶಿವಗಡದ ಕಡೆಯಿಂದ ಕಾರವಾರದತ್ತ ಆರ್‌ಜೆ-46/ಎಸ್‌ಕ್ಯೂ-1824 ನೋಂದಣಿ ಸಂಖ್ಯೆಯ ಸುಜುಕಿ ಅವೆನಿಸ್ ಬೈಕ್‌ನಲ್ಲಿ ಬರುತ್ತಿದ್ದ ಅಶೋಕ ಹೇಮಾರಾಮ್, ಮುಂದೆ ಸಾಗುತ್ತಿದ್ದ ಗೂಡ್ಸ್ ವಾಹನವನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ, ಎದುರಿಗೆ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಲ್ಲಿದ್ದವರು ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಅಶೋಕ ಹೇಮಾರಾಮ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಗಣೇಶ ಲಮಾಣಿ ಹಾಗೂ ಮೃತ ಸವಾರನ ಬೈಕ್‌ನಲ್ಲಿದ್ದ ಲಕ್ಷ್ಮಣ ಅರ್ಜುನ ರಾಮ ಅವರಿಗೆ ಮುಖದ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿದ್ದು, ದೂರುದಾರ ಚಿರಾಗ್ ಅವರಿಗೆ ಬಲಗಣ್ಣಿನ ಬಳಿ ಹಾಗೂ ಕೈಕಾಲುಗಳಿಗೆ ಗಾಯಗಳಾಗಿವೆ.

ಈ ಸಂಬಂಧ ಚಿರಾಗ್ ನೀಡಿದ ದೂರಿನ ಮೇರೆಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 281, 125(ಎ), 125(ಬಿ) ಹಾಗೂ 106ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *