Spread the love

ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರಿರುವ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ. ದೆಹಲಿಗೆ ಹೋದಾಗ ಅಲ್ಲಿನ ಸಂಸದರು ‘ಕರ್ನಾಟಕದಲ್ಲಿ ಏನು ನಡೆಯುತ್ತಿದೆ?’ (ಕರ್ನಾಟಕ ಮೆ ಕ್ಯಾ ಚಲ್ ರಹಾ ಹೈ?) ಎಂದು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದರು. 

ಗ್ಯಾರಂಟಿ ಯೋಜನೆಗಳ ಹಣ ಸಮರ್ಪಕವಾಗಿ ತಲುಪದಿರುವುದು, ವಾಲ್ಮೀಕಿ ನಿಗಮದ ಹಗರಣ, ಕೆಪಿಎಸ್‌ಸಿ ನೇಮಕಾತಿಯಲ್ಲಿ ಲಂಚ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸದಿರುವುದು ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸರ್ಕಾರದ ವೈಫಲ್ಯಕ್ಕೆ ಕನ್ನಡಿಯಾಗಿವೆ ಎಂದರು.

“ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳ ಅಧೀನದಲ್ಲಿರುವ ಆರ್ಥಿಕ ಇಲಾಖೆಯೇ ಬೊಕ್ಕಸದಲ್ಲಿ ಹಣವಿಲ್ಲವೆಂದು ಹೊಸ ಯೋಜನೆ ಘೋಷಿಸದಂತೆ ಸೂಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದ ಅನುದಾನ ಘೋಷಿಸಿರುವುದು ಸರ್ಕಾರದ ವಿಪರ್ಯಾಸ” ಎಂದು ಕಾಗೇರಿ ಟೀಕಿಸಿದರು. 

ಅಲ್ಲದೆ, ಸರ್ಕಾರವು ಕುಡಿಯುವ ನೀರು ಪೂರೈಸುವುದನ್ನು ಬಿಟ್ಟು ಕೇವಲ ಅಬಕಾರಿ ಇಲಾಖೆಯ ಆದಾಯವನ್ನೇ ನೆಚ್ಚಿಕೊಂಡು ಎಲ್ಲೆಡೆ ಮದ್ಯ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಭಾಷ್ ವೃತ್ತದಿಂದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಮಾರ್ಗಮಧ್ಯೆ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಹಣವನ್ನು ಆರ್ಥಿಕ ದಿವಾಳಿಯಾಗಿರುವ ರಾಜ್ಯ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿಕೊಡುವುದಾಗಿ ಮುಖಂಡರು ತಿಳಿಸಿದರು. 

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನ್ಯಾಯವಾದಿ ನಾಗರಾಜ ನಾಯಕ ಸೇರಿದಂತೆ ಪಕ್ಷದ ಹಲವು ಪ್ರಮುಖರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *