ಕಾರವಾರ: ತಮ್ಮ ಶಾಂತ ಸ್ವಭಾವ, ತಾಳ್ಮೆಯ ಮಾತು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವ ಕಾರ್ಯಶೈಲಿಯಿಂದಲೇ ಜನರ ವಿಶ್ವಾಸ ಗಳಿಸಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ನೂತನ ಜಿಲ್ಲಾಧಿಕಾರಿಯಾಗಿ (DC) ಬೆಂಗಳೂರಿನ ಇ-ಆಡಳಿತ ವಿಭಾಗದ ನಿರ್ದೇಶಕರಾಗಿದ್ದ ಭೋಯರ್ ಹರ್ಷಲ್ ನಾರಾಯಣರಾವ್ ಅವರನ್ನು ನೇಮಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.
2024ರಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕೆ. ಲಕ್ಷ್ಮೀಪ್ರಿಯಾ ಅವರಿಗೆ ಆರಂಭದಿಂದಲೇ ಪ್ರಕೃತಿ ವಿಕೋಪಗಳ ದೊಡ್ಡ ಸವಾಲುಗಳು ಎದುರಾಗಿದ್ದವು. ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ, ಪ್ರವಾಹ ಪರಿಸ್ಥಿತಿ ಹಾಗೂ ವಿಶೇಷವಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ ಭೀಕರ ಗುಡ್ಡ ಕುಸಿತದಂತಹ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ದುರಂತವನ್ನು ಅವರು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದ್ದರು.
ಮಣ್ಣಿನಡಿ ಸಿಲುಕಿದವರ ಶೋಧ ಕಾರ್ಯಾಚರಣೆ, ಸಂತ್ರಸ್ತರಿಗೆ ನೆರವು ಹಾಗೂ ಪರಿಹಾರ ಕಾರ್ಯಗಳ ಸಮನ್ವಯದಲ್ಲಿ ಹಗಲಿರುಳು ಶ್ರಮಿಸಿದ್ದರು. ಅಧಿಕಾರಿಗಳ ಸಭೆ ಇರಲಿ ಅಥವಾ ಸಾರ್ವಜನಿಕರ ಅಹವಾಲು ಸ್ವೀಕಾರವಿರಲಿ, ಆತುರದ ಪ್ರತಿಕ್ರಿಯೆ ನೀಡದೆ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಮೂಲಕ ಅವರು ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಸದ್ಯ ವರ್ಗಾವಣೆಗೊಂಡಿರುವ ಕೆ. ಲಕ್ಷ್ಮೀಪ್ರಿಯಾ ಅವರನ್ನು ಇದೀಗ ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿ ಅವರು ಎಫ್‌ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ ವಿಭಾಗಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಇವರ ನಿರ್ಗಮನದಿಂದ ತೆರವಾದ ಉತ್ತರ ಕನ್ನಡ ಜಿಲ್ಲಾಡಳಿತದ ಚುಕ್ಕಾಣಿಯನ್ನು ಇದೀಗ ನೂತನ ಡಿಸಿ ಭೋಯರ್ ಹರ್ಷಲ್ ನಾರಾಯಣರಾವ್ ಅವರು ವಹಿಸಿಕೊಳ್ಳಲಿದ್ದಾರೆ.
