Spread the love

ಕಾರವಾರ: ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡಲು ಆನ್‌ಲೈನ್‌ನಲ್ಲಿ ಖರೀದಿದಾರರನ್ನು ಹುಡುಕುತ್ತಿದ್ದ ಉದ್ಯಮಿಯೊಬ್ಬರಿಗೆ, ಗ್ರೀಸ್ (Greece) ದೇಶದ ಕಂಪನಿಯ ಹೆಸರಿನಲ್ಲಿ ಅರಿಶಿಣ ಖರೀದಿಸುವುದಾಗಿ ನಂಬಿಸಿ ಬರೋಬ್ಬರಿ 4.29 ಲಕ್ಷ ವಂಚಿಸಿರುವ ಆಘಾತಕಾರಿ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಕುಮಟಾ ತಾಲ್ಲೂಕಿನ ವನ್ನಳ್ಳಿ ವ್ಯಾಪ್ತಿಯ ನಂದಗೋಕುಲ ನಿವಾಸಿ ನಿತ್ಯಾನಂದ ಗೋಳಿ ನಾಯ್ಕ (53) ವಂಚನೆಗೊಳಗಾದ ಉದ್ಯಮಿ.

ವಂಚನೆ ನಡೆದಿದ್ದು ಹೇಗೆ? 

ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ವ್ಯವಹಾರ ನಡೆಸುತ್ತಿರುವ ನಿತ್ಯಾನಂದ ಅವರು, 2026ರ ಸೆಪ್ಟೆಂಬರ್ 28ರಂದು ಗೂಗಲ್‌ನಲ್ಲಿ ವಿದೇಶಿ ಖರೀದಿದಾರರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅವರಿಗೆ ‘ವೆಬ್ ಸಲ್ಯೂಷನ್ಸ್ ಎಕ್ಸ್‌ಪೋರ್ಟ್’ (Web Solutions Export) ಎಂಬ ಕಂಪನಿಯ ವೆಬ್‌ಸೈಟ್ ಕಣ್ಣಿಗೆ ಬಿದ್ದಿದೆ. ವೆಬ್‌ಸೈಟ್‌ನಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ, ಭುವನ ಚಂದ್ರ ಎಂಬಾತ ಮಾತನಾಡಿ, ವಿದೇಶಿ ಖರೀದಿದಾರರನ್ನು ಸ್ಥಳೀಯ ರಫ್ತುದಾರರಿಗೆ ಪರಿಚಯಿಸುವ ಕೆಲಸ ಮಾಡುವುದಾಗಿ ನಂಬಿಸಿದ್ದಾನೆ.

98 ಲಕ್ಷ ರೂ. ಡೀಲ್ ಆಮಿಷ: 

ಬಳಿಕ ಆತ ವಾಟ್ಸ್‌ಆ್ಯಪ್ ಮೂಲಕ ಗ್ರೀಸ್ ದೇಶದ ‘ಮ್ಯಾಗ್ನಾ ಗ್ರೇಸಿಯಾ ಟ್ರೇಡ್ ಎಲ್ಎಲ್’ಸಿ’ (Magna Graecia Trade LLC) ಕಂಪನಿಯ ಮಾಲೀಕನೆಂದು ಹೇಳಲಾದ ವಾಸಿಲಿಸ್ ಕಾನ್‌ಸ್ಟಾಂಟಿಪೌಲಸ್ ಎಂಬಾತನನ್ನು ಪರಿಚಯಿಸಿದ್ದಾನೆ. ಈ ನಕಲಿ ವಿದೇಶಿ ವ್ಯಕ್ತಿಯು 25 ಮೆಟ್ರಿಕ್ ಟನ್ ಅರಿಶಿಣದ ಕೊಂಬನ್ನು ಅಂದಾಜು 98 ಲಕ್ಷಕ್ಕೆ ಖರೀದಿಸುವುದಾಗಿ ಉದ್ಯಮಿಗೆ ಬಲೆ ಬೀಸಿದ್ದಾನೆ.

ಪ್ರಮಾಣಪತ್ರಗಳ ಹೆಸರಲ್ಲಿ ಸುಲಿಗೆ: 

ಈ ಬೃಹತ್ ಮೊತ್ತದ ರಫ್ತು ವ್ಯವಹಾರಕ್ಕೆ ಕಡ್ಡಾಯವಾಗಿ BRC, Kosher Compliance, ECO Cert ಹಾಗೂ ISO ಪ್ರಮಾಣಪತ್ರಗಳು ಬೇಕಾಗುತ್ತವೆ ಎಂದು ಆರೋಪಿಗಳು ನಂಬಿಸಿದ್ದಾರೆ. ಈ ಪ್ರಮಾಣಪತ್ರಗಳನ್ನು ಮಾಡಿಸಿಕೊಡಲು ಮುಂಗಡ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ನಿತ್ಯಾನಂದ ನಾಯ್ಕ ಅವರು 2026ರ ಅಕ್ಟೋಬರ್ 6 ರಿಂದ 21ರ ಅವಧಿಯಲ್ಲಿ ಆರೋಪಿಗಳು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 4,29,000 ಜಮಾ ಮಾಡಿದ್ದಾರೆ.

ಆದರೆ, ಹಣ ವರ್ಗಾವಣೆಯಾದ ಬಳಿಕ ಆರೋಪಿಗಳು ಯಾವುದೇ ಸ್ಪಂದನೆ ನೀಡದೆ ವ್ಯವಹಾರವನ್ನು ನಿಲ್ಲಿಸಿದ್ದಾರೆ. ತಾವು ಸೈಬರ್ ಖದೀಮರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಉದ್ಯಮಿ ಪೊಲೀಸರ ಮೊರೆ ಹೋಗಿದ್ದಾರೆ.

ಸದ್ಯ ಉದ್ಯಮಿಯ ದೂರಿನ ಮೇರೆಗೆ ಕಾರವಾರ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ (BNS) ಕಲಂ 319(2), 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ (IT Act) ಕಲಂ 66(ಡಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *