Spread the love

ಹಳಿಯಾಳ: ರಸ್ತೆಯ ರಾಂಗ್ ಸೈಡ್‌ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ, ರಿಫ್ಲೆಕ್ಟರ್‌ಗಳನ್ನೂ ಅಳವಡಿಸದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ತಾಲೂಕಿನ ಕೆಸರೊಳ್ಳಿ ಅಂಚೆ ವ್ಯಾಪ್ತಿಯ ಅಜಗಾಂವ ನಿವಾಸಿ, ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ಮಾರುತಿ ರಾಮಾ ಹುಲಮನಿ (28) ಮೃತಪಟ್ಟ ದುರ್ದೈವಿ.

ಘಟನೆಯ ವಿವರ: ಮೃತ ಮಾರುತಿ ಅವರು ರಾತ್ರಿ 8:15ರ ಸುಮಾರಿಗೆ ತಮ್ಮ ಬೈಕಿನಲ್ಲಿ (KA-65/H-9392) ಕೆಸರೊಳ್ಳಿ ಕಡೆಯಿಂದ ಅಜಗಾಂವ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿ 28ರಲ್ಲಿ ಮಾವಳು ಫಕ್ಕೀರಪ್ಪ ಎಂಬುವವರ ಮನೆಯ ಮುಂಭಾಗ ಹಳದಿ ಬಣ್ಣದ ಟ್ರ್ಯಾಕ್ಟರ್ ಟ್ರಾಲಿಯನ್ನು (KA-65/T-1295) ರಸ್ತೆಗೆ ಅಡ್ಡಿಯಾಗುವಂತೆ ಹಾಗೂ ರಾಂಗ್ ಸೈಡ್‌ನಲ್ಲಿ ನಿಲ್ಲಿಸಲಾಗಿತ್ತು.

ರಾತ್ರಿ ಸಮಯವಾಗಿದ್ದರಿಂದ ಹಾಗೂ ಟ್ರಾಲಿಗೆ ಯಾವುದೇ ರಿಫ್ಲೆಕ್ಟರ್‌ಗಳನ್ನು (Reflectors) ಅಳವಡಿಸದೇ ಇದ್ದುದರಿಂದ ಟ್ರಾಲಿ ನಿಂತಿರುವುದು ಬೈಕ್ ಸವಾರನ ಗಮನಕ್ಕೆ ಬಂದಿಲ್ಲ. ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ಮಾರುತಿ, ನೇರವಾಗಿ ಟ್ರಾಲಿಯ ಮುಂಭಾಗಕ್ಕೆ ಗುದ್ದಿದ್ದಾರೆ.

ಗಂಭೀರ ಗಾಯ, ಸ್ಥಳದಲ್ಲೇ ಸಾವು: 

ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಮಾರುತಿಯವರ ಎಡಕಣ್ಣು, ಎಡಕಿವಿ ಹಾಗೂ ಎದೆಗೆ ಭಾರಿ ಸ್ವರೂಪದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಕಾರಣರಾದ ಟ್ರ್ಯಾಕ್ಟರ್ ಟ್ರಾಲಿ ಚಾಲಕನ ನಿರ್ಲಕ್ಷ್ಯ ಹಾಗೂ ಮೃತ ಬೈಕ್ ಸವಾರನ ಅತಿವೇಗದ ಚಾಲನೆ ಕುರಿತು ಅಜಗಾಂವ ನಿವಾಸಿ ನಾಮದೇವ ಅರ್ಜುನ ಹುಲಮನಿ ಅವರು ನೀಡಿದ ದೂರಿನ ಮೇರೆಗೆ, ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ (BNS) ಕಲಂ 285, 281, 106(1) ಹಾಗೂ ಐ.ಎಂ.ವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *