ಮುಂಡಗೋಡ: ತಾಲ್ಲೂಕಿನ ಕಾತೂರು ನಂದೀಪುರ ಗ್ರಾಮದಲ್ಲಿ ಬುಧವಾರ ತಡರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ. ಗ್ರಾಮದ ಸರ್ವೆ ನಂಬರ್ 76ರಲ್ಲಿರುವ ರೈತ ಶ್ರೀನಿವಾಸ್ ಲಕ್ಷ್ಮಣ ವಡ್ಡರ್ ಎಂಬುವವರ ಜಮೀನಿಗೆ ನುಗ್ಗಿದ ಆನೆಗಳು, 20ಕ್ಕೂ ಅಧಿಕ ಅಡಿಕೆ ಹಾಗೂ ಬಾಳೆ ಗಿಡಗಳನ್ನು ತುಳಿದು ನಾಶಪಡಿಸಿವೆ. ಏಕಾಏಕಿ ನಡೆದ ಈ ದಾಳಿಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
15 ದಿನಗಳಿಂದ ನಿಲ್ಲದ ಹಾವಳಿ, ನಿದ್ದೆ ಬಿಟ್ಟು ಕಾವಲು
ತಾಲ್ಲೂಕಿನ ಬೆಡಸಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಲಿ, ತೊಗರಳ್ಳಿ, ಕೊಪ್ಪ, ಹಾಲರಬ್ಬಿ, ಜಂಬೆಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 10 ರಿಂದ 15 ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದೆ. ಹಗಲು-ರಾತ್ರಿ ಎನ್ನದೆ ಜಮೀನುಗಳಿಗೆ ನುಗ್ಗುತ್ತಿರುವ ಆನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ನಿದ್ದೆ ಬಿಟ್ಟು ರಾತ್ರಿ ಪೂರ್ತಿ ಕಾವಲು ಕಾಯುತ್ತಿದ್ದಾರೆ.
ಪಟಾಕಿ ಸಿಡಿಸಿ, ಶಬ್ದ ಮಾಡಿ ಓಡಿಸಲು ಎಷ್ಟೇ ಪ್ರಯತ್ನಿಸಿದರೂ ಆನೆಗಳು ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ತೆರಳುತ್ತಿವೆಯೇ ಹೊರತು, ಗ್ರಾಮಗಳ ವ್ಯಾಪ್ತಿ ಬಿಟ್ಟು ಅರಣ್ಯದತ್ತ ಮುಖ ಮಾಡುತ್ತಿಲ್ಲ. ಇದರಿಂದ ಸ್ಥಳೀಯರು ಸಂಪೂರ್ಣ ಹೈರಾಣಾಗಿದ್ದಾರೆ.
ಅರಣ್ಯ ಇಲಾಖೆ ಕಾರ್ಯವೈಖರಿಗೆ ರೈತರ ಅಸಮಾಧಾನ
ಕಾಡಾನೆಗಳ ಉಪಟಳದಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಕೆಲವೆಡೆ ಸಾರ್ವಜನಿಕರೊಂದಿಗೆ ಕೈಜೋಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದರೂ, ನಿರಂತರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ನಡೆಯುತ್ತಿಲ್ಲ ಎಂಬುದು ಸ್ಥಳೀಯ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆಗಳನ್ನು ದಟ್ಟ ಅರಣ್ಯಕ್ಕೆ ಅಟ್ಟುವ ಜೊತೆಗೆ, ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
