Spread the love

ಜೋಯಿಡಾ: ರಸ್ತೆಯ ಮೇಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಕಾರೊಂದು ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸುಮಾರು 40 ಅಡಿ ಆಳದ ತಗ್ಗಿಗೆ ಬಿದ್ದು ಮೃ*ತಪಟ್ಟಿರುವ ದಾರುಣ ಘಟನೆ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ (NH-4A)ಯಲ್ಲಿ ನಡೆದಿದೆ.

ಶುಕ್ರವಾರ(ನ.20) ಮಧ್ಯಾಹ್ನ 2:50ರ ಸುಮಾರಿಗೆ ಜಳಕಟ್ಟಿ ಗ್ರಾಮದ ಸಮೀಪದ ಹಾಥಿ ಬ್ರಿಡ್ಜ್ (Hathi Bridge) ಮೇಲೆ ಈ ಭೀಕರ ಅಪಘಾತ ಸಂಭವಿಸಿದೆ. ಮೃ*ತ ದುರ್ದೈವಿಯನ್ನು ಬೈಕ್ ಸವಾರ ಅರವಿಂದ ವಿಠೋಬಾ ಕಾಣಕೊಣಕರ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಗೋವಾ ರಾಜ್ಯದ ನಿವಾಸಿ ಶೇಖರ ಅನಾಮಲೈ ಉಡಿಯಾರ (68) ಎಂಬುವವರು ತಮ್ಮ ಟೊಯೊಟಾ ಕಾರನ್ನು (GA-03/N-6270) ರಾಮನಗರ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾರೆ. ಹಾಥಿ ಬ್ರಿಡ್ಜ್ ಮೇಲೆ ರಸ್ತೆಯಲ್ಲಿದ್ದ ತಗ್ಗುಗಳನ್ನು ತಪ್ಪಿಸಲು ಪ್ರಯತ್ನಿಸಿದಾಗ ಕಾರಿನ ಮೇಲಿನ ನಿಯಂತ್ರಣ ತಪ್ಪಿ, ಒಮ್ಮೆಲೆ ರಸ್ತೆಯ ಬಲಬದಿಗೆ ನುಗ್ಗಿದೆ. ಈ ವೇಳೆ ಅನಮೋಡ ಕಡೆಯಿಂದ ರಾಮನಗರದತ್ತ ಬರುತ್ತಿದ್ದ ಅರವಿಂದ ಅವರ ಬೈಕ್‌ಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ.

40 ಅಡಿ ಆಳದ ತಗ್ಗಿಗೆ ಬಿದ್ದ ಸವಾರ: 

ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ ಬೈಕ್ ಸಮೇತ ಹೆದ್ದಾರಿಯ ಸಿಮೆಂಟ್ ತಡೆಗೋಡೆಗೆ ಅಪ್ಪಳಿಸಿ, ಮೇಲಿಂದ ಹಾರಿ ಸುಮಾರು 40 ಅಡಿ ಆಳದ ತಗ್ಗಿನಲ್ಲಿ ಬಿದ್ದಿದ್ದಾರೆ. ಇದರಿಂದ ಅವರ ಮೂಗು, ಹಣೆ, ಬಲಗೈ, ಬಲಕಾಲು ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ರಕ್ತಗಾಯಗಳಾಗಿವೆ.

ಅದೇ ಮಾರ್ಗವಾಗಿ ಗೋವಾದಿಂದ ತರಕಾರಿ ವಾಹನದಲ್ಲಿ ಮರಳುತ್ತಿದ್ದ ರಾಮನಗರದ ಚಾಲಕ ರಾಜು ಬಾಬು ಭೋವಿವಡ್ಡರ (31) ಅವರು ತಕ್ಷಣವೇ ಆಂಬ್ಯುಲೆನ್ಸ್ ಸಹಾಯದಿಂದ ಗಾಯಾಳುವನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 3:55ಕ್ಕೆ ಮೃ*ತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ರಾಜು ಬಾಬು ಭೋವಿವಡ್ಡರ ನೀಡಿದ ದೂರಿನ ಮೇರೆಗೆ ರಾಮನಗರ ಪೊಲೀಸ್ ಠಾಣೆಯಲ್ಲಿ (ಗುನ್ನಾ ನಂ. 126/2026) ಭಾರತೀಯ ನ್ಯಾಯ ಸಂಹಿತೆ-2023ರ (BNS) ಕಲಂ 281 ಮತ್ತು 106ರ ಅಡಿಯಲ್ಲಿ ಕಾರು ಚಾಲಕ ಶೇಖರ ಅನಾಮಲೈ ಉಡಿಯಾರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *