Spread the love

ಶಿರಸಿ: ತಾಲೂಕಿನ ಮಳಲಗಾಂವ ಗ್ರಾಮದಲ್ಲಿ ಭತ್ತದ ಗದ್ದೆಗೆ ಅಕ್ರಮವಾಗಿ ವಿದ್ಯುತ್ ಹರಿಸಿದ್ದ ತಂತಿ ಬೇಲಿಗೆ ಸಿಲುಕಿ ಸುಮಾರು 20ರಿಂದ 22 ವರ್ಷ ವಯಸ್ಸಿನ ಗಂಡಾನೆಯೊಂದು ಮೃತಪಟ್ಟಿದೆ. ನವೆಂಬರ್ 22ರಂದು ಗ್ರಾಮದ ಮಾಲ್ಕಿ ಜಮೀನಿನಲ್ಲಿ (ಸರ್ವೇ ನಂ. 72/1) ಈ ದುರ್ಘಟನೆ ನಡೆದಿದೆ.

ಕಾಡಾನೆಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನ ಸುತ್ತಲೂ ವಿದ್ಯುತ್ ಲೈನ್‌ನಿಂದ ನೇರವಾಗಿ ಬೇಲಿಗೆ ಅಕ್ರಮ ವಿದ್ಯುತ್ ಹರಿಸಲಾಗಿತ್ತು. ಈ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಆನೆ ಸ್ಥಳದಲ್ಲೇ ಮೃತಪಟ್ಟಿರುವುದು ಅರಣ್ಯ ಇಲಾಖೆಯ ಪರಿಶೀಲನೆ ವೇಳೆ ದೃಢಪಟ್ಟಿದೆ.

​ತಂದೆ-ಮಗನ ಬಂಧನ, ವನ್ಯಜೀವಿ ಕಾಯ್ದೆಯಡಿ ಪ್ರಕರಣ

​ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮಳಲಗಾಂವ ಗ್ರಾಮದ ಶಿವಪ್ಪ ಬಂಗಾರ್ಯ ನಾಯ್ಕ (75) ಹಾಗೂ ಅವರ ಮಗ ನಾಗರಾಜ ಶಿವಪ್ಪ ನಾಯ್ಕ (43) ಎಂಬುವವರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಿದ್ಯುತ್ ತಂತಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಬನವಾಸಿ ವಲಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಇಂತಹ ವನ್ಯಜೀವಿ ಅಪರಾಧಕ್ಕೆ 7 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.

​ಸ್ಥಳಕ್ಕೆ ಶಾಸಕ ಭೀಮಣ್ಣ ನಾಯ್ಕ ಹಾಗೂ ಅಧಿಕಾರಿಗಳ ಭೇಟಿ

​ಘಟನಾ ಸ್ಥಳಕ್ಕೆ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹಾಗೂ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಗಂಡಾನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ್ ಅವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತಿಕ ಕಂಬಳಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
​

Leave a Reply

Your email address will not be published. Required fields are marked *