Spread the love

ಶಿರಸಿ: ನಗರದ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಖದೀಮೆಯರನ್ನು ಬಂಧಿಸುವಲ್ಲಿ ಶಿರಸಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಫಿರ್ಯಾದಿದಾರರು ಬಸ್ ನಿಲ್ದಾಣದಲ್ಲಿದ್ದಾಗ, ಯಾರೋ ದುಷ್ಕರ್ಮಿಗಳು ಅವರ ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು ಒಳಗಿದ್ದ ಆಭರಣಗಳ ಬಾಕ್ಸ್ ಅನ್ನು ಕಳವು ಮಾಡಿದ್ದರು.

ಈ ಬಾಕ್ಸ್‌ನಲ್ಲಿ ಅಂದಾಜು 18 ಗ್ರಾಂ ತೂಕದ ಚಿನ್ನದ ಶಾರ್ಟ್ ನೆಕ್ಲೆಸ್, 30 ಗ್ರಾಂ ತೂಕದ ಉದ್ದನೆಯ ಹಾರ, 2 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ 10 ಗ್ರಾಂ ಬೆಳ್ಳಿ ನಾಣ್ಯ ಸೇರಿ ಒಟ್ಟು 3.52 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ್ದ ಶಿರಸಿ ನಗರ ಠಾಣೆಯ ಪೊಲೀಸರು, ಕಲಂ 303(2) ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

​ಈ ಗಂಭೀರ ಪ್ರಕರಣದ ಪತ್ತೆಗಾಗಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಶಿರಸಿ ಪೊಲೀಸರು ನುರಿತ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಈ ತಂಡವು ತಾಂತ್ರಿಕ ಮಾಹಿತಿ ಹಾಗೂ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿ, ಕೃತ್ಯವೆಸಗಿದ್ದ ಇಬ್ಬರು ಮಹಿಳಾ ಆರೋಪಿಗಳನ್ನು ಗುರುವಾರ(ಆ.13) ಪತ್ತೆ ಹಚ್ಚಿ ಬಂಧಿಸಿದೆ.

ಬಂಧಿತರನ್ನು ಶಿವಮೊಗ್ಗದ ಗೋಪಾಲ ಎಕ್ಸ್‌ಟೆನ್ಷನ್ ವ್ಯಾಪ್ತಿಯ ಮಲ್ಲಿಗೇನಹಳ್ಳಿ ನಿವಾಸಿ ಸುಶೀಲಾ (39) ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಎ.ಕೆ. ಕಾಲೋನಿ ನಿವಾಸಿ ಸಾಯಿಲಕ್ಷ್ಮಿ (36) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೂಲಿ ಕೆಲಸದ ನೆಪದಲ್ಲಿ ಬಂದು ಕಳ್ಳತನದಲ್ಲಿ ತೊಡಗುತ್ತಿದ್ದರು. ಬಂಧಿತರನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದಾಗ ಅವರು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದು, ಅವರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

​ಈ ಯಶಸ್ವಿ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ, ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಸಿಪಿಐ ಸಂಪತ್ ಈ.ಸಿ ಅವರ ನೇರ ಮಾರ್ಗದರ್ಶನದಲ್ಲಿ ಜರುಗಿದೆ.

ಶಿರಸಿ ನಗರ ಠಾಣೆಯ ಪಿಎಸ್‌ಐ ನರಸಿಂಹಲು ಟಿ. ಹಾಗೂ ಪಿಎಸ್‌ಐ ನಾರಾಯಣ ರಾಠೋಡ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಸವರಾಜ ಹಗರಿ, ಕೋಟೇಶ್ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ರಾಜು ಎಂ, ಹನುಮಂತ ಕಬಾಡಿ, ಚನ್ನಬಸಪ್ಪ, ಶೋಭಾ ಹಾಗೂ ಕಾರವಾರ ತಾಂತ್ರಿಕ ವಿಭಾಗದ ಉದಯ್ ಗುನಗಾ ಮತ್ತು ಬಬನ್ ಕದಂ ಪಾಲ್ಗೊಂಡಿದ್ದರು. ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಶಿರಸಿ ನಗರ ಠಾಣೆಯ ಸಂಪೂರ್ಣ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *