Spread the love

ಕಾರವಾರ: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ರಸ್ತೆಯಲ್ಲಿ ಕಾದಾಡುತ್ತಿದ್ದ ಹೋರಿಗಳು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ರಾಜೇಶ್ವರಿ (29) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮಲ್ಲಾಪುರ ಗ್ರಾಮದ ಸುಭದ್ರಾ ಹೋಟೆಲ್ ಬಳಿ ಈ ಆಘಾತಕಾರಿ ಅವಘಡ ಸಂಭವಿಸಿದೆ. ರಾಜೇಶ್ವರಿ ಅವರು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಏಕಾಏಕಿ ಎರಡು ಹೋರಿಗಳು ಭಯಾನಕವಾಗಿ ಗುದ್ದಾಡುತ್ತಾ ಬಂದು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿವೆ. ಹೋರಿಗಳ ರಭಸದ ಹೊಡೆತಕ್ಕೆ ಆಯತಪ್ಪಿದ ಮಹಿಳೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ.

ಬಲವಾದ ಏಟು ಬಿದ್ದು ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಅವರನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ವರಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಕುರಿತು ಮಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *