Spread the love

ಜೋಯಿಡಾ: ಗೋವಾ ಗಡಿಯ ಅನಮೋಡ ಅಬಕಾರಿ ತನಿಖಾ ಠಾಣೆಯ ನಿರೀಕ್ಷಕರಿಗೆ ಬ್ಲಾಕ್‌ಮೇಲ್ ಮಾಡಿ 10 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಸುಳ್ಳು ಜಾತಿ ನಿಂದನೆ (Atrocity) ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ ಆರೋಪದಡಿ ಬೆಳಗಾವಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ: 

ಬೆಳಗಾವಿಯ ಕಂಗ್ರಾಳಿ ಕೆ.ಎಚ್.ನ ಜ್ಯೋತಿ ನಗರ ನಿವಾಸಿ ಮಾರುತಿ ಕೇಳಗೇರಿ ಎಂಬಾತನೇ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಆರೋಪಿ. ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ (55) ಅವರು ನೀಡಿದ ದೂರಿನ ಮೇರೆಗೆ ಬಿ.ಎನ್.ಎಸ್ 2023ರ ಕಲಂ 308(2), 351(2) ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಗೋವಾದಿಂದ ಬರುವ ವಾಹನಗಳನ್ನು ತಪಾಸಣೆ ಮಾಡುವಾಗ, ಈ ಹಿಂದೆ ಆರೋಪಿ ಮಾರುತಿ ತಾನೇ ವಿಡಿಯೋ ಮಾಡಿಕೊಂಡು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದ. ಈ ಬಗ್ಗೆ ಮೇಲಾಧಿಕಾರಿಗಳು ವಿಚಾರಣೆ ನಡೆಸಿ ವರದಿ ಕೂಡ ನೀಡಿದ್ದರು.

ನಕಲಿ ಮದ್ಯದೊಂದಿಗೆ ಬಂದು ನಾಟಕ: 

ಅಕ್ಟೋಬರ್ 24ರಂದು ಸಂಜೆ 4:20ರ (16:20) ಸುಮಾರಿಗೆ ನಿರೀಕ್ಷಕ ಮಹೇಂದ್ರ ಅವರು ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದಾಗ, ಉದಯ ಬಸೋಜಿ ಎಂಬಾತ ಎರಡು ಬಾಟಲಿಗಳಿರುವ ಕವರನ್ನು ತಂದು ಅಬಕಾರಿ ಸಿಬ್ಬಂದಿಗೆ ಒತ್ತಾಯಪೂರ್ವಕವಾಗಿ 200 ರೂ. ನೀಡಲು ಯತ್ನಿಸಿದ್ದಾನೆ. ಲಂಚ ಪಡೆಯಲು ನಿರಾಕರಿಸಿದ ಸಿಬ್ಬಂದಿ, ಬಾಟಲಿಯಲ್ಲಿದ್ದ ಮದ್ಯದ ರೀತಿಯ ದ್ರವ ಪದಾರ್ಥವನ್ನು ಚೆಲ್ಲಿಸಿದ್ದಾರೆ. ಆದರೆ ಆ ದ್ರವಕ್ಕೆ ಯಾವುದೇ ವಾಸನೆ ಇರಲಿಲ್ಲ. ಈ ಪ್ರಕ್ರಿಯೆಯನ್ನು ಅಧಿಕಾರಿಗಳು ವಿಡಿಯೋ ಮಾಡಿಕೊಂಡಿದ್ದರು.

ಜಾತಿ ನಿಂದನೆ ಕೇಸಿನ ಬೆದರಿಕೆ: 

ಇದೇ ವೇಳೆ ಏಕಾಏಕಿ ಸ್ಥಳಕ್ಕೆ ಬಂದ ಆರೋಪಿ ಮಾರುತಿ ಕೇಳಗೇರಿ, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. “ಅಬಕಾರಿ ಠಾಣೆಯಲ್ಲಿ ನಡೆಯುವ ಅಕ್ರಮದ ಬಗ್ಗೆ ನಾನು ಮಾಡಿರುವ ವಿಡಿಯೋ ಮತ್ತು ಮೇಲಾಧಿಕಾರಿಗಳಿಗೆ ನೀಡಿರುವ ದೂರನ್ನು ಮುಂದುವರಿಸದಿರಲು ಹಾಗೂ ವಾಪಸ್ ಪಡೆಯಲು ನನಗೆ 10 ಲಕ್ಷ ರೂ. ನೀಡಬೇಕು” ಎಂದು ಬ್ಲಾಕ್‌ಮೇಲ್ ಮಾಡಿದ್ದಾನೆ. ಇದಕ್ಕೆ ಜಗ್ಗದ ಅಧಿಕಾರಿಗಳು, “ನಾವು ಯಾವುದೇ ತಪ್ಪು ಮಾಡಿಲ್ಲ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಹಣ ಕೊಡುವುದಿಲ್ಲ” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇದರಿಂದ ಕುಪಿತನಾದ ಆರೋಪಿ ಮಾರುತಿ, “ನಾನು ಬುದ್ಧ ಬಸವ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷನಾಗಿದ್ದು, ನಿಮ್ಮ ಮೇಲೆ ಜಾತಿ ನಿಂದನೆ ಕೇಸು ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಸಂಜೆ 7:20ರವರೆಗೂ (19:20) ಅಲ್ಲೇ ಇದ್ದು, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ ಅಬಕಾರಿ ನಿರೀಕ್ಷಕರು ಇದೀಗ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *