Spread the love

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಕಾರವಾರ ಹಾಗೂ ಶಿರಸಿ ನಗರಸಭೆ ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ದಾಖಲೆಗಳು ಮತ್ತು ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತದಲ್ಲಿ ದಾಖಲಾಗಿರುವ ಸುಮೋಟೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಉತ್ತರಕನ್ನಡ ಲೋಕಾಯುಕ್ತ ಎಸ್‌ಪಿ ದಿನೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ಕೈಗೊಂಡಿದ್ದು, ಕಾರವಾರ ನಗರಸಭೆ ಕಚೇರಿಗೆ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ತಂಡ ಆಗಮಿಸಿತು.

ನಗರಸಭೆಯ ವಿವಿಧ ವಿಭಾಗಗಳಿಗೆ ತೆರಳಿದ ಅಧಿಕಾರಿಗಳು ಕಂದಾಯ, ತೆರಿಗೆ ಸೇರಿದಂತೆ ಹಲವು ವಿಭಾಗಗಳ ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರು. ಬಾಕಿ ಉಳಿದಿರುವ ಕಡತಗಳು, ಅವುಗಳ ವಿಲೇವಾರಿ ಹಾಗೂ ಸಂಬಂಧಿತ ದಾಖಲೆಗಳ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ನಗರಸಭೆ ಆಯುಕ್ತ ಜಗದೀಶ ಹುಲಿಗೆಜ್ಜೆ ಅವರ ಕೊಠಡಿಗೂ ತೆರಳಿದ ಅಧಿಕಾರಿಗಳು ಕೆಲಕಾಲ ಮಾಹಿತಿ ಪಡೆದುಕೊಂಡಿದ್ದಾರೆ.

ಇದೇ ವೇಳೆ ಶಿರಸಿ ನಗರಸಭೆಗೂ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ ಜಿಲ್ಲೆಯಲ್ಲಿರುವ 9 ಹಾಸ್ಟೆಲ್‌ಗಳಿಗೂ ಸರ್ಪ್ರೈಸ್ ವಿಸಿಟ್ ನಡೆಸಿ ಅಲ್ಲಿನ ವ್ಯವಸ್ಥೆ, ದಾಖಲೆಗಳು ಹಾಗೂ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲೆಯ ಆಸ್ಪತ್ರೆಯೊಂದಕ್ಕೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಂದೇ ವೇಳೆ ಜಿಲ್ಲೆಯ ಹಲವು ಸರ್ಕಾರಿ ಸಂಸ್ಥೆಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಯಾವ ಅಂಶಗಳ ಕುರಿತು ಸುಮೋಟೋ ಪ್ರಕರಣ ದಾಖಲಾಗಿದೆ ಮತ್ತು ಪರಿಶೀಲನೆಯಲ್ಲಿ ಏನೆಲ್ಲ ಅಂಶಗಳು ಪತ್ತೆಯಾಗಿವೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಸಂಪೂರ್ಣ ಪರಿಶೀಲನೆ ಪೂರ್ಣಗೊಂಡ ಬಳಿಕ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ ಹಾಗೂ ದಾಖಲೆಗಳ ಆಧಾರದ ಮೇಲೆ ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *