ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ವಲ್ಕಿ ಪ್ರದೇಶದಲ್ಲಿ ನಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಅಂಪೈರ್ ತೀರ್ಪಿನ ವಿಚಾರವಾಗಿ ಶುರುವಾದ ವಾಗ್ವಾದವು ವಿಕೋಪಕ್ಕೆ ತಿರುಗಿ, ಜಗಳ ಬಿಡಿಸಲು ಹೋದ ವೃದ್ಧನೋರ್ವನಿಗೆ ಬ್ಯಾಟ್‌ನಿಂದ ಮನಬಂದಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ವಲ್ಕಿ ನಿವಾಸಿ, 58 ವರ್ಷದ ರೈತ ಶೇಖ್ ಮಹಮ್ಮದ್ ಜುಬೇರ ಎಂಬುವವರೇ ಹಲ್ಲೆಗೊಳಗಾದವರು.
ಅಂಪೈರ್ ತೀರ್ಪೇ ಗಲಾಟೆಗೆ ಕಾರಣ!
ದೂರಿನ ಮಾಹಿತಿಯ ಪ್ರಕಾರ, ಮಂಗಳವಾರ(ಮೇ 5) ಸಂಜೆ ಕೊಳಗದ್ದೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಆಟಗಾರ ಅಬ್ದುಲ್ ರೆಹಮಾನ್ ಎಂಬಾತ ಔಟ್ ಆಗಿದ್ದಾನೆ ಎಂದು ಅಂಪೈರ್ ತೀರ್ಪು ನೀಡಿದ್ದರು. ಆದರೆ, ಈ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸುಬಾನ್ ಖಾಜಾ ಫಕರ್ದೀನ್ (24) ಹಾಗೂ ಮೇಹದಿ ಖಾಜಾ ಫಕರ್ದೀನ್ (21) ಎಂಬ ಯುವಕರು ಮೈದಾನದಲ್ಲೇ ಅಂಪೈರ್ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದರು.
ಜಗಳ ಬಿಡಿಸಲು ಹೋದವರ ಮೇಲೆಯೇ ಹಲ್ಲೆ
ಮೈದಾನದಲ್ಲಿ ಮಾತಿನ ಚಕಮಕಿ ಮಿತಿಮೀರುತ್ತಿರುವುದನ್ನು ಗಮನಿಸಿದ ಜುಬೇರ ಅವರು, ಜಗಳ ಬಿಡಿಸುವ ಉದ್ದೇಶದಿಂದ ಮಧ್ಯಪ್ರವೇಶಿಸಿದ್ದಾರೆ. “ಅಂಪೈರ್ ಸರಿಯಾದ ತೀರ್ಪನ್ನೇ ನೀಡಿದ್ದಾರೆ, ಸುಮ್ಮನೆ ಗಲಾಟೆ ಮಾಡಬೇಡಿ” ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಆರೋಪಿಗಳು, ಅಂಪೈರ್ ಮೇಲಿನ ಕೋಪವನ್ನು ಜುಬೇರ ಅವರ ಮೇಲೆ ತೀರಿಸಿಕೊಂಡಿದ್ದಾರೆ.
ಸಂಜೆ ಸುಮಾರು 4:45ರಿಂದ 4:50ರ ಸಮಯದಲ್ಲಿ ಜುಬೇರ ಅವರ ಮೇಲೆ ಏಕಾಏಕಿ ಮುಗಿಬಿದ್ದ ಆರೋಪಿಗಳಾದ ಸುಬಾನ್ ಮತ್ತು ಮೇಹದಿ, ತಮ್ಮ ಕೈಲಿದ್ದ ಕ್ರಿಕೆಟ್ ಬ್ಯಾಟ್‌ಗಳಿಂದಲೇ ಹಲ್ಲೆ ನಡೆಸಿದ್ದಾರೆ. ಸುಬಾನ್ ಬ್ಯಾಟ್‌ನಿಂದ ಜುಬೇರ ಅವರ ತಲೆಗೆ ಬಲವಾಗಿ ಹೊಡೆದು ಗಾಯಪಡಿಸಿದ್ದಾನೆ. ಮೇಹದಿ ಮತ್ತೊಂದು ಬ್ಯಾಟ್‌ನಿಂದ ಜುಬೇರ ಅವರ ಬೆನ್ನಿಗೆ ಹೊಡೆದು ತೀವ್ರ ನೋವುಂಟುಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಾಳು ಜುಬೇರ ಅವರು ನೀಡಿದ ದೂರಿನ ಆಧಾರದ ಮೇಲೆ ಹೊನ್ನಾವರ ಪೊಲೀಸರು ಆರೋಪಿಗಳ ವಿರುದ್ಧ ಕಲಂ 118(1), 352 ಸಹಿತ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
