ಕಾರವಾರ: ತಾಲೂಕಿನ ಕೈಗಾದಲ್ಲಿರುವ ‘ಭಾರತೀಯ ಅಣು ವಿದ್ಯುತ್ ನಿಗಮ ನಿಯಮಿತ’ (NPCIL) ಘಟಕದಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಸ್ಥಳೀಯ ಯುವಕರಿಗೆ ಭಾರೀ ಅನ್ಯಾಯವಾಗುತ್ತಿದೆ. ಅರ್ಹತೆ ಹಾಗೂ ಕೌಶಲ್ಯವಿದ್ದರೂ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ಯುವ ಮುಖಂಡ ಅಮೃತ್ ಬಾಂದೇಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಮಕಾತಿಯಲ್ಲಿ ಹೊರರಾಜ್ಯದವರಿಗೆ ಮಣೆ
ಎನ್‌ಪಿಸಿಐಎಲ್ ಕೈಗಾ ಘಟಕದಲ್ಲಿ ಇತ್ತೀಚೆಗೆ 350ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗದ ನಿರೀಕ್ಷೆಯಲ್ಲಿ ಜಿಲ್ಲೆಯ ಸಾವಿರಾರು ಯುವಕರು ಪರೀಕ್ಷೆ ಬರೆದಿದ್ದರು. ಆದರೆ, ಇದೀಗ ಆರಂಭವಾಗಿರುವ ಸಂದರ್ಶನ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ಒಬ್ಬೇ ಒಬ್ಬ ಸ್ಥಳೀಯ ಅಭ್ಯರ್ಥಿಗೂ ಅವಕಾಶ ಸಿಕ್ಕಿಲ್ಲ. ಬದಲಾಗಿ, ಹೊರ ರಾಜ್ಯದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುತ್ತಿದೆ ಎಂದು ಅಮೃತ್ ಬಾಂದೇಕರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ತ್ಯಾಗ ಮಾಡಿದ ಜಿಲ್ಲೆಯ ಜನರಿಗೆ ವಂಚನೆ
ಕೈಗಾ ಅಣು ವಿದ್ಯುತ್ ಯೋಜನೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನತೆ ತಮ್ಮ ಅಮೂಲ್ಯವಾದ ನೆಲ ಮತ್ತು ಜಲವನ್ನು ತ್ಯಾಗ ಮಾಡಿದ್ದಾರೆ. ಈ ಯೋಜನೆಯಿಂದ ಉಂಟಾಗುವ ಎಲ್ಲಾ ಅಡ್ಡಪರಿಣಾಮಗಳನ್ನು ಸ್ಥಳೀಯರೇ ಎದುರಿಸಬೇಕಾಗಿದೆ. ಆದರೆ, ಉದ್ಯೋಗ ನೀಡುವ ವಿಚಾರ ಬಂದಾಗ ಮಾತ್ರ ಸ್ಥಳೀಯರನ್ನು ಕಡೆಗಣಿಸಿ, ಶೇ. 70ರಷ್ಟು ಉದ್ಯೋಗ ಮೀಸಲಾತಿಯ ಭರವಸೆಯನ್ನು ಕೇವಲ ಕಾಗದದ ಮೇಲಷ್ಟೇ ಸೀಮಿತಗೊಳಿಸಲಾಗಿದೆ. ಕೈಗಾದಲ್ಲಿ ಈಗಾಗಲೇ 4 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 5 ಮತ್ತು 6ನೇ ಘಟಕಗಳ ಕಾಮಗಾರಿ ನಡೆಯುತ್ತಿದ್ದರೂ, ಸ್ಥಳೀಯರಿಗೆ ಉದ್ಯೋಗ ಮಾತ್ರ ಮರೀಚಿಕೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳ ಮೌನಕ್ಕೆ ಬೇಸರ
ಬೇರೆ ರಾಜ್ಯಗಳಲ್ಲಿ ಇಂತಹ ಬೃಹತ್ ಯೋಜನೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾದರೆ, ಅಲ್ಲಿನ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಿ ಹೋರಾಡುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಈಗಲಾದರೂ ಜಿಲ್ಲೆಯ ಎಲ್ಲಾ ನಾಯಕರು ಪಕ್ಷಭೇದ ಮರೆತು ಒಗ್ಗೂಡಿ, ಎನ್‌ಪಿಸಿಐಎಲ್ ನೇಮಕಾತಿಯಲ್ಲಿ ಸ್ಥಳೀಯ ಯುವಕರಿಗೆ ಶೇ. 70ರಷ್ಟು ಆದ್ಯತೆ ಕಲ್ಪಿಸಲು ಧ್ವನಿ ಎತ್ತಬೇಕು ಹಾಗೂ ಅವರಿಗೆ ನ್ಯಾಯ ಒದಗಿಸಬೇಕು ಎಂದು ಅಮೃತ್ ಬಾಂದೇಕರ್ ಆಗ್ರಹಿಸಿದ್ದಾರೆ.
