ಕುಮಟಾ: ತಾಲೂಕಿನ ವಾಲಗಳ್ಳಿ ಸಮೀಪದ ಜಡ್ಡಿಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾ*ವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃ*ತ ದುರ್ದೈವಿ ವಿದ್ಯಾರ್ಥಿಯನ್ನು ಪ್ರಶಾಂತ ಕೇಶವ ಮುಕ್ರಿ (18) ಎಂದು ಗುರುತಿಸಲಾಗಿದೆ.
ನೀರಿನಲ್ಲಿ ಮುಳುಗಿದ ವಿದ್ಯಾರ್ಥಿ
ಪ್ರಶಾಂತ ತನ್ನ ನಾಲ್ಕೈದು ಮಂದಿ ಸ್ನೇಹಿತರ ಜೊತೆ ಸೇರಿ ಜಡ್ಡಿಕೆರೆಗೆ ಈಜಲು ಹೋಗಿದ್ದ. ಈ ವೇಳೆ ನೀರಿನ ಆಳ ಮತ್ತು ಸೆಳೆತದ ಅರಿವಿಲ್ಲದೆ ಆತ ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಸ್ಥಳೀಯರು ಕೆರೆಯ ಬಳಿ ಜಮಾಯಿಸಿ ಹುಡುಕಾಟಕ್ಕೆ ಮುಂದಾದರು.
ಬಳಿಕ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ಸಂದರ್ಭದಲ್ಲಿ ಶೋಧ ಕಾರ್ಯದ ವಿಚಾರವಾಗಿ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಸಣ್ಣಮಟ್ಟದ ಮಾತಿನ ಚಕಮಕಿಯೂ ನಡೆಯಿತು. ತದನಂತರ ಶೋಧ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿತು.
ಸ್ವತಃ ನೀರಿಗಿಳಿದ ಪಿಎಸ್‌ಐ ಖಾದರ್ ಭಾಷಾ
ಈ ಕಾರ್ಯಾಚರಣೆಯ ವೇಳೆ ಕುಮಟಾ ಠಾಣೆಯ ಪಿಎಸ್‌ಐ ಖಾದರ್ ಭಾಷಾ ಅವರ ಕರ್ತವ್ಯನಿಷ್ಠೆ ಎಲ್ಲರ ಗಮನ ಸೆಳೆಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು, ಕಿಂಚಿತ್ತೂ ಹಿಂಜರಿಯದೆ ಸ್ವತಃ ಕೆರೆಯ ನೀರಿಗೆ ಇಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರೊಂದಿಗೆ ಕೈಜೋಡಿಸಿದರು. ನೀರಿನಲ್ಲಿ ಶೋಧ ನಡೆಸಿ ವಿದ್ಯಾರ್ಥಿಯ ಮೃ*ತದೇಹವನ್ನು ಪತ್ತೆಹಚ್ಚಿ ಮೇಲಕ್ಕೆತ್ತುವ ಕಾರ್ಯದಲ್ಲಿ ಅವರು ನೇರವಾಗಿ ಭಾಗಿಯಾದರು.
ಅಧಿಕಾರಿಯೊಬ್ಬರು ಕರ್ತವ್ಯದ ವೇಳೆ ತೋರಿದ ಈ ಧೈರ್ಯ ಹಾಗೂ ಮಾನವೀಯತೆಗೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
