Spread the love

ಕಾರವಾರ: ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸಬೇಕು. ಅರ್ಹರಿಗೆ ಮತದಾನದ ಹಕ್ಕು ಒದಗಿಸುವಲ್ಲಿ ನಾವು ಯಾವುದೇ ಕಾರಣಕ್ಕೂ ವಿಫಲರಾಗಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.

ಕಾರವಾರ ಹಾಗೂ ಅಂಕೋಲಾದಲ್ಲಿ ಭಾನುವಾರ ನಡೆದ ಎಸ್‌ಐಆರ್-2 ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಫಾರಂ ಭರ್ತಿ ಮಾಡಿಸಿಕೊಟ್ಟ ಬಳಿಕ ನಮ್ಮ ಕರ್ತವ್ಯ ಮುಗಿದಿಲ್ಲ. ಇದೀಗ 2ನೇ ಹಂತದ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರ ಪಟ್ಟಿಯಿಂದ ತಪ್ಪಿಹೋಗಿರುವ ಅರ್ಹ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಇದಕ್ಕಾಗಿ ಅಕ್ಟೋಬರ್ 8ರವರೆಗೆ ಕಾಲಾವಕಾಶವಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕೆಲವು ಅರ್ಹ ಮತದಾರರು ಈ ಹಿಂದೆ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಇದೀಗ ಹಬ್ಬಗಳ ಸಂದರ್ಭದಲ್ಲಿ ಅವರು ತಮ್ಮ ಊರುಗಳಿಗೆ ಆಗಮಿಸುವ ಸಾಧ್ಯತೆಯಿದೆ. ಅಂತಹವರನ್ನು ಗುರುತಿಸಿ ಸಂಪರ್ಕಿಸಿ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗುವಂತೆ ಅಗತ್ಯ ಸಹಕಾರ ನೀಡಬೇಕು. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ದೊರೆಯುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ರೂಪಾಲಿ ಎಸ್. ನಾಯ್ಕ್ ಹೇಳಿದರು.

ನಿಕಟಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಇದೀಗ ಅಂತಿಮ ಹಂತದಲ್ಲಿದ್ದು, ಇಲ್ಲಿಯವರೆಗೆ ಎಲ್ಲರೂ ವಿಶೇಷ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ. ಮುಂದಿನ ಹಂತದಲ್ಲೂ ಇದೇ ರೀತಿಯ ಉತ್ಸಾಹದಿಂದ ಕಾರ್ಯನಿರ್ವಹಿಸಬೇಕು ಎಂದರು.

ಬಿಎಲ್‌ಎ-1 ರಾಘು ಭಟ್ ಅವರು ಮುಂದಿನ ಹಂತದಲ್ಲಿ ಬಿಎಲ್‌ಎ-2ಗಳ ಜವಾಬ್ದಾರಿಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲದ ಸಭೆ ಕಾರವಾರದ ಬಿಜೆಪಿ ಕಚೇರಿಯಲ್ಲಿ ಹಾಗೂ ಅಂಕೋಲಾ ಮಂಡಲದ ಸಭೆ ಅಂಕೋಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು ಹಾಗೂ ಬಿಎಲ್‌ಎ-2ಗಳು ಭಾಗವಹಿಸಿದ್ದರು.

ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರಡೇಕರ್, ರಾಜ್ಯ ಪ್ರಕೋಷ್ಠ ಸದಸ್ಯ ಸುನಿಲ್ ಸೋನಿ, ನಗರ ಪ್ರಭಾರಿ ರಾಜು ಭಂಡಾರಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ಮನೋಜ್ ಭಟ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಸ್ವಾಗತಿಸಿದರು. ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ವಂದಿಸಿದರು.

ಅಂಕೋಲಾ ಮಂಡಲದ ಸಭೆಯಲ್ಲಿ ಸಂಜಯ ನಾಯ್ಕ್, ಚಂದ್ರಕಾಂತ ನಾಯ್ಕ್, ಸೂರಜ್ ನಾಯ್ಕ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಜವಾಬ್ದಾರಿ ಹೊಂದಿರುವ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *