Spread the love

ಸಿದ್ದಾಪುರ: “ನನ್ನ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಅಮೃತಹಸ್ತದಿಂದ ಚಾಲನೆಗೊಂಡಿದ್ದ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವ ಯೋಗ ನನಗೆ ದೊರೆತಿರುವುದು ನನ್ನ ಪಾಲಿನ ದೊಡ್ಡ ಸೌಭಾಗ್ಯವಾಗಿದೆ” ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹರ್ಷ ವ್ಯಕ್ತಪಡಿಸಿದರು.

ಸಿದ್ದಾಪುರ ಪಟ್ಟಣದ ಹೊಸೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. 2006ರಲ್ಲಿ ಎಸ್. ಬಂಗಾರಪ್ಪನವರಿಂದ ಶಿಲಾನ್ಯಾಸಗೊಂಡಿದ್ದ ಈ ಭವನದ ಕಾಮಗಾರಿಯು ಹಲವು ಕಾರಣಾಂತರಗಳಿಂದ ವಿಳಂಬವಾಗಿತ್ತು. ಇದೀಗ ನಾನು ಶಾಸಕನಾಗಿರುವ ಅವಧಿಯಲ್ಲಿ ಈ ಬಹುನಿರೀಕ್ಷಿತ ಭವನ ಪೂರ್ಣಗೊಳ್ಳಲಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಹೇಳಿದರು.

ಸಮಾಜದ ಪ್ರಮುಖರ ಮನವಿಯ ಮೇರೆಗೆ ಭವನದ ನಿರ್ಮಾಣಕ್ಕೆ 1.50 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಈಗಾಗಲೇ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಉಳಿದ 50 ಲಕ್ಷ ರೂ.ಗಳನ್ನು ಅತಿ ಶೀಘ್ರದಲ್ಲಿಯೇ ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. 

ಶಾಸಕನಾಗಿ ಆಯ್ಕೆಯಾದ ಬಳಿಕ ಸರ್ವ ಸಮುದಾಯಗಳ ಏಳಿಗೆಯನ್ನು ಬಯಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನಗಳನ್ನು ಒದಗಿಸುತ್ತಿದ್ದೇನೆ. ಈ ಸಮುದಾಯ ಭವನದ ಯಶಸ್ವಿ ನಿರ್ಮಾಣಕ್ಕಾಗಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಕೈಲಾದ ಆರ್ಥಿಕ ಹಾಗೂ ನೈತಿಕ ಸಹಕಾರ ನೀಡಬೇಕು ಎಂದು ಭೀಮಣ್ಣ ನಾಯ್ಕ ಕರೆ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್, ಮುಂಬರುವ ಮಾರ್ಚ್ ಅಥವಾ ಏಪ್ರಿಲ್ ತಿಂಗಳೊಳಗೆ ಸಮುದಾಯ ಭವನವನ್ನು ಸಂಪೂರ್ಣವಾಗಿ ಸಿದ್ಧಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಭವನ ನಿರ್ಮಾಣಕ್ಕೆ ಇದುವರೆಗೆ ಸರ್ಕಾರದಿಂದ ಒಟ್ಟು 3.18 ಕೋಟಿ ರೂ. ವೆಚ್ಚವಾಗಿದೆ. ಶಾಸಕರು 1.50 ಕೋಟಿ ರೂ.ಗಳ ಬೃಹತ್ ಅನುದಾನ ನೀಡಿದ್ದಾರೆ. ಕಟ್ಟಡ ಉದ್ಘಾಟನೆಗೊಂಡ ಬಳಿಕ ಸಮಾಜದ ಅಭಿವೃದ್ಧಿಗಾಗಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಆನಂದ ನಾಯ್ಕ, ಉಪಾಧ್ಯಕ್ಷರಾದ ಕೆ.ಜಿ. ನಾಗರಾಜ, ವಿ.ಎನ್. ನಾಯ್ಕ, ಕಾರ್ಯದರ್ಶಿ ಎಸ್.ಎಂ. ನಾಯ್ಕ ಹಾಗೂ ನಿರ್ಮಿತಿ ಕೇಂದ್ರದ ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಶೈಲಾ ನಾಯ್ಕ ಪ್ರಾರ್ಥನೆ ಸಲ್ಲಿಸಿದರು. ನಾಗರಾಜ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರೂಪಿಸಿದರು. ಕೆ.ಜಿ. ನಾಗರಾಜ ಸ್ವಾಗತ ಕೋರಿದರೆ, ವಿ.ಎನ್. ನಾಯ್ಕ ಬೇಡ್ಕಣಿ ವಂದನಾರ್ಪಣೆ ಮಾಡಿದರು.

“ಕ್ಷೇತ್ರದ ಪ್ರತಿಯೊಂದು ಸಮಾಜದ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಬಲವರ್ಧನೆಗೆ ಶ್ರಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾಮಧಾರಿ ಸಮುದಾಯ ಭವನದ ಕಾಮಗಾರಿಯು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು, ಸಮಾಜದ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಒಗ್ಗೂಡಿಸಿ ನಡೆಸಲು ಇದು ಅತ್ಯುತ್ತಮ ವೇದಿಕೆಯಾಗಲಿದೆ.” 

– ಭೀಮಣ್ಣ ಟಿ. ನಾಯ್ಕ, ಶಾಸಕರು, ಶಿರಸಿ-ಸಿದ್ದಾಪುರ ಕ್ಷೇತ್ರ

Leave a Reply

Your email address will not be published. Required fields are marked *