ಡಿ.ಆರ್.ಎಫ್.ಓ ಗುರುರಾಜ್ ಗೌಡರಿಗೆ ಮನೆಯಂಗಳದಲ್ಲಿ ಸನ್ಮಾನ!

Spread the love

ಅಂಕೋಲಾ : ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನೀಡುವ ಎನ್.ಟಿ.ಸಿ.ಎ ಅವಾರ್ಡ ಫಾರ್ ಎಕ್ಸಲೆನ್ಸ್ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಪುರಸ್ಕೃತರಾದ ಡಿ.ಆರ್.ಎಫ್.ಓ ಗುರುರಾಜ್ ಸಾತು ಗೌಡ ಇವರನ್ನು ಸಮಾನ ಮನಸ್ಕ ಗೆಳೆಯರ ಬಳಗದ ವತಿಯಿಂದ ಅಂಕೋಲಾ ತಾಲೂಕಿನ ಕೇಣಿಯಲ್ಲಿರುವ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಳೆದ ಕೆಲವು ವರ್ಷಗಳಿಂದ ಹುಟ್ಟಿಕೊಂಡ ಸಮಾನ ಮನಸ್ಕ ಗೆಳೆಯರ ಬಳಗವು ವೃತ್ತಿ ನಿವೃತ್ತರ ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರ ಮನೆಯಂಗಳಕ್ಕೆ ಹೋಗಿ ಸನ್ಮಾನಿಸಿ ಕುಶಲೋಪರಿ ವಿಚಾರಿಸಿ ಪ್ರೋತ್ಸಾಹಿಸುತ್ತಾ ಬರುತ್ತಿದ್ದು ಸೋಮವಾರ ಕೇಣಿಯಲ್ಲಿರುವ ವಿಶ್ರಾಂತ ಶಿಕ್ಷಕ ಸಾತು ಗೌಡರ ಮನೆಯಂಗಳದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಗುರುರಾಜ್ ಗೌಡರನ್ನು ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಹಾರ ಫಲಪುಷ್ಪ ಹಾಗೂ ದೀಪಾವಳಿಯ ದೈವ ಲಕ್ಷ್ಮೀ ದೇವಿಯ ಮೂರ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತಾಡಿದ ಗುರುರಾಜ್ ಗೌಡ ತಮ್ಮ ಮನೆ ಅಂಗಳಕ್ಕೆ ಬಂದು ಸನ್ಮಾನಿಸಿ ಕುಶಿ ನೀಡಿದ ಬಂಧುಗಳು ನೀಡಿದ ಪ್ರೀತಿಯ ಗೌರವ ಪುರಸ್ಕಾರ ಅಲ್ಲದೆ ಪ್ರಾಥಮಿಕ ಶಿಕ್ಷಣ ಒಂದರಿಂದ ಏಳನೇ ತರಗತಿಯ ತನಕ ತಿದ್ದಿ ಬುದ್ಧಿ ಹೇಳಿದ ಗುರುಗಳಾದ ಬಿ.ಪಿ.ಗೌಡ ಮತ್ತು ಉಮೇಶ್ ಗೌಡ ಅವರನ್ನು ಸದಾ ತನ್ನ ಮನದ ಗುಡಿಯಲ್ಲಿ ಪೂಜಿಸುವದಾಗಿ ಗುರುಗಳ ಬಗ್ಗೆ ತಮ್ಮ ಅಭಿಮಾನವನ್ನು ಎಲ್ಲರ ಜೊತೆ ಪ್ರೀತಿಯಿಂದ ಹಂಚಿಕೊಂಡರು.

ಶಿಕ್ಷಕ ಅಂಬಾರಕೊಡ್ಲದ ಗಣಪತಿ ಗೌಡ ಗಣೇಶನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ನೀಡಿದರು  ನಿವೃತ್ತ ಶಿಕ್ಷಕ ಯಕ್ಷಗಾನ ಕಲಾವಿದ ತುಳುಸು ಗೌಡ ಬೆಳಸೆ ಸರ್ವರನ್ನು ಸ್ವಾಗತಿಸಿದರು.  ನಿವೃತ್ತ ಶಿಕ್ಷಕ  ಬಿ. ಪಿ .ಗೌಡ ಸನ್ಮಾನಕ್ಕೆ ಪುರಸ್ಕೃತರಾದ ಪ್ರೀತಿಯ ಶಿಷ್ಯ ಗುರುರಾಜ್ ಗೌಡರ ಕಿರು ಪರಿಚಯವನ್ನು ಮಾಡಿದರು.

ನಿವೃತ್ತ ಶಿಕ್ಷಕ ಲಕ್ಷ್ಮಣ ಗೌಡ ಸಮಾನ ಮನಸ್ಕಗೆಳೆಯರ ಬಳಗದ ಕುರಿತು ಪರಿಚಯಿಸಿ ನಮ್ಮ ಹಾಲಕ್ಕಿ ಸಮಾಜದ ಗುರುರಾಜ್ ಗೌಡರ ಸಾಧನೆ ನಮ್ಮ ಸಮಾಜವು ಹೆಮ್ಮೆ ಪಡುವ ವಿಷಯ ಎಂದು ಅವರಿಗೆ ಶುಭಕೋರಿದರು. ಶಿಕ್ಷಕ ಉಮೇಶ್ ಗೌಡ ತನ್ನ ಶಿಷ್ಯನ ಕುರಿತಾಗಿ ಹೆಮ್ಮೆಯ ಮಾತಾಡಿ ತಮ್ಮ ಮನದಾಳದ ಖುಶಿಯನ್ನು ಹಂಚಿಕೊಂಡರು. ಶಿಕ್ಷಕ ಸುಬ್ರಾಯ ಗೌಡ  ಗುರುರಾಜ್ ಗೌಡರ ಸಾಧನೆ ಶ್ಲಾಘನೀಯ ಹಾಗೂ ನಮ್ಮೂರಿನ ಹೆಮ್ಮೆ ಎಂದು ತಮ್ಮ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಭಾವಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಾಂಡು ಬಿ.ಗೌಡ, ಸದಸ್ಯ ಸುಕ್ರು.ಕೆ.ಗೌಡ,
ತಾ.ಪಂ. ಮಾಜಿ ಉಪಾಧ್ಯಕ್ಷೆ ತುಳಸಿ ಗೌಡ, ನಿವೃತ್ತ ಶಿಕ್ಷಕ ಚಂದ್ರಹಾಸ ಗೌಡ, ಸುಕ್ರು ರಾಜ ಗೌಡ, ಪ್ರಕಾಶ್ ಆರ್ ನಾಯ್ಕ, ಭಾರತಿ ಮತ್ತು ಏಕಾದಶಿ ಗೌಡ, ವನಜಾಕ್ಷಿ ಸುಬ್ರಾಯ ಗೌಡ, ಸಾತು ಗೌಡ ಹಾಗೂ ಕುಟುಂಬಸ್ತರು
ಮುಂತಾದವರು ಉಪಸ್ಥಿತರಿದ್ದರು. ಸುಪ್ರಿಯಾ ಗೌಡ ವಂದಿಸಿದರು. ಗಣಪತಿ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *