ಕಾರವಾರ: ಬೆಂಗಳೂರಿನ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (GSI) ವತಿಯಿಂದ ‘ನ್ಯಾಷನಲ್ ಏರೋ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಮ್’ (NAGMP) ಅಡಿಯಲ್ಲಿ ಬ್ಲಾಕ್-7 ರ ಸಮೀಕ್ಷಾ ಕಾರ್ಯವು ನಡೆಯುತ್ತಿದ್ದು, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡಿರುವ ವಿಶೇಷ ವಿಮಾನಗಳು ಅತ್ಯಂತ ಕೆಳಹಂತದಲ್ಲಿ ಹಾರಾಟ ನಡೆಸಲಿವೆ. ಹೀಗಾಗಿ ತಮ್ಮ ಪ್ರದೇಶದ ಮೇಲ್ಭಾಗದಲ್ಲಿ ಅತೀ ಸಮೀಪದಲ್ಲಿ ವಿಮಾನ ಹಾರಾಟ ಕಂಡು ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಪ್ರಕಟಣೆಯ ಮೂಲಕ ಮನವಿ ಮಾಡಿದೆ.
ಖನಿಜಾನ್ವೇಷಣೆ ಮತ್ತು ಭೂವೈಜ್ಞಾನಿಕ ಅಧ್ಯಯನಕ್ಕಾಗಿ ಈ ಅತ್ಯಾಧುನಿಕ ವೈಜ್ಞಾನಿಕ ಸರ್ವೇ ಕಾರ್ಯವನ್ನು ನಡೆಸಲಾಗುತ್ತಿದೆ. ಈ ಸಮೀಕ್ಷೆಯಿಂದ ಸಂಗ್ರಹಿಸಲಾಗುವ ಮಹತ್ವದ ಮಾಹಿತಿಯನ್ನು ‘ನ್ಯಾಷನಲ್ ಜಿಯೋಸೈನ್ಸ್ ಡೇಟಾ ರೆಪಾಸಿಟರಿ’ಯಲ್ಲಿ (NGDR) ಅಳವಡಿಸಲಾಗುತ್ತದೆ. ಭವಿಷ್ಯದಲ್ಲಿ ಖನಿಜಾನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವ ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಸಾರ್ವಜನಿಕರ ಬಳಕೆಗೆ ಈ ಮಾಹಿತಿ ಮುಕ್ತವಾಗಿ ಲಭ್ಯವಾಗಲಿದೆ.
ಆದ್ದರಿಂದ ಜಿಲ್ಲೆಯ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು, ನಿರಂತರವಾಗಿ ನಡೆಯುವ ಈ ವೈಜ್ಞಾನಿಕ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕು ಹಾಗೂ ಕೆಳಮಟ್ಟದಲ್ಲಿ ಹಾರುವ ವಿಮಾನಗಳನ್ನು ಕಂಡು ಯಾವುದೇ ಕಾರಣಕ್ಕೂ ಭಯಪಡಬಾರದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
