ಭಟ್ಕಳ: ಕುಮಟಾದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಭಟ್ಕಳ ಡಿಪೋಗೆ ಸೇರಿದ ಕೆಎಸ್ಆರ್‌ಟಿಸಿ (KSRTC) ಬಸ್ಸಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮುರುಡೇಶ್ವರದ ಟೆಲಿಫೋನ್ ಕಚೇರಿ ಎದುರು ನಡೆದಿದೆ. ಆದರೆ, ಸ್ಥಳೀಯರ ತ್ವರಿತ ಕಾರ್ಯಾಚರಣೆ ಹಾಗೂ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.
ಬಸ್ಸಿನ ಕೆಳಭಾಗದಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಾರ್ವಜನಿಕರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ತಕ್ಷಣ ಬಸ್ಸಿನ ಬಾನೆಟ್ ಓಪನ್ ಮಾಡಿ, ಗಿಡದ ಸೊಪ್ಪುಗಳನ್ನು ಹಾಕಿ ಹಾಗೂ ನೀರನ್ನು ಬಳಸಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿದ್ದಾರೆ. ಇದೇ ವೇಳೆ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವಾಹನವನ್ನು ಸ್ವಲ್ಪ ಮುಂದಕ್ಕೆ ತಳ್ಳುವ ಮೂಲಕ ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.
ಈ ತುರ್ತು ಸಂದರ್ಭದಲ್ಲಿ ಮುರುಡೇಶ್ವರದ ಆಟೋ ಚಾಲಕ ಮಂಜುನಾಥ್ ಮೊಗೇರ ಅವರು ಸಮಯಪ್ರಜ್ಞೆ ಮೆರೆದಿದ್ದಾರೆ. ಅವರು ಸಾರ್ವಜನಿಕರೊಂದಿಗೆ ಕೈಜೋಡಿಸಿ ಸತತ ಹರಸಾಹಸ ಪಡುವ ಮೂಲಕ ಬಸ್ಸಿಗೆ ಹೊತ್ತಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಬಚಾವು ಮಾಡುವಲ್ಲಿ ಹಾಗೂ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಮಂಜುನಾಥ್ ಮತ್ತು ಸಾರ್ವಜನಿಕರು ತೋರಿದ ದಿಟ್ಟ ಕಾರ್ಯಕ್ಕೆ ಇದೀಗ ಎಲ್ಲೆಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
