Spread the love

ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜುಲೈ 5ರ ಮಧ್ಯಾಹ್ನದಿಂದ ಜುಲೈ 9ರ ಬೆಳಿಗ್ಗೆ 8.30ರ ವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಈ ಅವಧಿಯಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ಮುಂಗಾರು ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಹವಾಮಾನ ಪರಿಸ್ಥಿತಿಯ ಕುರಿತಾದ ಕ್ಷಣಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣಗಳಲ್ಲಿ ಪಡೆಯಬಹುದಾಗಿದೆ.

ಮೀನುಗಾರರು, ಪ್ರವಾಸಿಗರು ಹಾಗೂ ಕೃಷಿಕರಿಗೆ ನಿರ್ಬಂಧ

​ಬಲವಾದ ಗಾಳಿ ಬೀಸುವ ಎಚ್ಚರಿಕೆ ಇರುವ ಕಾರಣ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಹಾಗೂ ಈಗಾಗಲೇ ಕಡಲಿಗೆ ತೆರಳಿರುವವರು ತಕ್ಷಣವೇ ಸುರಕ್ಷಿತ ಬಂದರುಗಳಿಗೆ ಮರಳಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಪ್ರವಾಸಿಗರು ಮತ್ತು ಸಾರ್ವಜನಿಕರು ಸಮುದ್ರತೀರ, ನದಿತೀರ ಹಾಗೂ ಜಲಾಶಯಗಳ ಬಳಿ ಸುಳಿಯದಂತೆ ನಿರ್ಬಂಧ ವಿಧಿಸಲಾಗಿದೆ. ಕೃಷಿಕರು ಸಹ ಬಲವಾದ ಗಾಳಿ ಮತ್ತು ಮಳೆಯ ಸಂದರ್ಭದಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ತಕ್ಷಣವೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಅಪಾಯಕಾರಿ ಕಟ್ಟಡಗಳು ಹಾಗೂ ವಿದ್ಯುತ್ ಕಂಬಗಳಿಂದ ದೂರವಿರಿ

​ಬಿರುಗಾಳಿ ಸಹಿತ ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರು ಮರಗಳು, ವಿದ್ಯುತ್ ಕಂಬಗಳು, ಜಾಹೀರಾತು ಫಲಕಗಳು, ನಿರ್ಮಾಣ ಹಂತದ ಕಟ್ಟಡಗಳು ಹಾಗೂ ತಾತ್ಕಾಲಿಕ ಶೆಡ್‌ಗಳ ಸಮೀಪ ನಿಲ್ಲಬಾರದು ಹಾಗೂ ವಾಹನಗಳನ್ನು ಪಾರ್ಕ್ ಮಾಡಬಾರದು ಎಂದು ಎಚ್ಚರಿಸಲಾಗಿದೆ.

ಅಪಾಯಕಾರಿ ಮರಗಳು ಅಥವಾ ಶಿಥಿಲಾವಸ್ಥೆಯ ಕಟ್ಟಡಗಳ ಸಮೀಪದ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ಶಾಲೆ ಹಾಗೂ ಅಂಗನವಾಡಿ ತರಗತಿಗಳನ್ನು ನಡೆಸಬಾರದು. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ತುಂಡಾದ ವಿದ್ಯುತ್ ತಂತಿಗಳು ಅಥವಾ ವಾಲಿರುವ ಕಂಬಗಳು ಕಂಡುಬಂದಲ್ಲಿ ತಕ್ಷಣವೇ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಬೇಕು.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹಾಗೂ ತುರ್ತು ಸಹಾಯವಾಣಿ

​ಸಾರ್ವಜನಿಕರು ಅತ್ಯವಶ್ಯಕ ಕೆಲಸಗಳಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಾಲುಸಂಕ ಹಾಗೂ ಕಿರು ಸೇತುವೆಗಳನ್ನು ಬಳಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಶಿಥಿಲಾವಸ್ಥೆಯಿಂದ ಜಾರುವ ಹಂತದಲ್ಲಿರುವ ಮನೆ ಅಥವಾ ದುರ್ಬಲ ಕಟ್ಟಡದಲ್ಲಿ ವಾಸಿಸುತ್ತಿರುವವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಅಥವಾ ತಹಶೀಲ್ದಾರರು ಗುರುತಿಸಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವುದು ಕಡ್ಡಾಯವಾಗಿದೆ.

​ಯಾವುದೇ ತುರ್ತು ಪರಿಸ್ಥಿತಿ, ಅಪಾಯಕಾರಿ ಮರಗಳು, ಕಟ್ಟಡಗಳು ಅಥವಾ ಜೀವಹಾನಿ ಸಂಭವಿಸುವಂತಹ ಸನ್ನಿವೇಶಗಳು ಎದುರಾದರೆ ಸಾರ್ವಜನಿಕರು ತಕ್ಷಣವೇ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಂಪರ್ಕಿಸಬಹುದು.

ತುರ್ತು ಸೇವೆಗಾಗಿ 24×7 ಕಂಟ್ರೋಲ್‌ ರೂಮ್ ಟೋಲ್ ಫ್ರೀ ಸಂಖ್ಯೆ 08382-229857 ಅಥವಾ ವಾಟ್ಸಾಪ್ ಸಂಖ್ಯೆ 9483511015 ಗೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *