ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52 ರ ಸುಂಕಸಾಳ ಬಳಿ ಗುರುವಾರ ನಸುಕಿನ ಜಾವ ಎರಡು ಖಾಸಗಿ ಬಸ್ಸುಗಳು ಹಾಗೂ ಲಾರಿಯ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಟ್ಟು 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 12 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಎಂಟು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅಪಘಾತ ನಡೆದಿದ್ದು ಹೇಗೆ?
ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಂಚರಿಸುತ್ತಿದ್ದ ಲಾರಿ ಹಾಗೂ ಹಂಪಿಯಿಂದ ಗೋವಾಕ್ಕೆ ತೆರಳುತ್ತಿದ್ದ ‘ಸಿಬರ್ಡ್’ ಹಾಗೂ ‘ಗಣೇಶ್ ಟ್ರಾವೆಲ್ಸ್’ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸ ಎಷ್ಟಿತ್ತೆಂದರೆ, ಸಿಬರ್ಡ್ ಬಸ್ಸಿನ ಹಿಂಬದಿಯಲ್ಲೇ ಬರುತ್ತಿದ್ದ ‘ಗಣೇಶ್ ಟ್ರಾವೆಲ್ಸ್’ ಬಸ್ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮೂರೂ ವಾಹನಗಳು ಜಖಂಗೊಂಡಿದೆ ಎನ್ನಲಾಗಿದೆ. ಗೋವಾಕ್ಕೆ ತೆರಳುತ್ತಿದ್ದ 12 ವಿದೇಶಿ ಪ್ರಜೆಗಳಿಗೂ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಸಿಲುಕಿ ಇಬ್ಬರು ಬಸ್ ಚಾಲಕರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.

ಸ್ಥಳೀಯರ ನೆರವು:ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಬಸ್ಸಿನಿಂದ ಹೊರತೆಗೆಯಲು ಹರಸಾಹಸ ಪಟ್ಟರು ಎನ್ನಲಾಗಿದೆ. ಗಾಯಾಳುಗಳನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ರಸ್ತೆಯ ಮಧ್ಯದಲ್ಲೇ ವಾಹನಗಳು ಸಿಲುಕಿಕೊಂಡಿದ್ದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.


