Spread the love

ಕಾರವಾರ: ಜೊಯಿಡಾ ತಾಲೂಕಿನ ರಾಮನಗರದ ಅನಮೋಡ್ ಚೆಕ್‌ಪೋಸ್ಟ್ ಬಳಿ ಅಬಕಾರಿ ಇಲಾಖೆ ದಾಖಲೆ ಬರೆಯುವಂತ ಕಾರ್ಯಾಚರಣೆ ನಡೆಸಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೋವಾಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1 ಕೋಟಿ ಮೌಲ್ಯದ ಸ್ಪಿರಿಟ್  (Extra Neutral Alcohol) ತುಂಬಿದ ಟ್ಯಾಂಕರ್‌ಗಳನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು…ಧಾರವಾಡ-ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ  21ರಂದು ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ ದಾವಣಗೆರೆಯಿಂದ ಗೋವಾಕ್ಕೆ ಸಾಗುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆಅಕ್ರಮ ಸ್ಪಿರಿಟ್ ಸಾಗಾಟಕ್ಕೆ ಸಂಬಂಧಿಸಿದಂತೆ ಇಂದೋರ್ ಮೂಲದ ಮಗ್ನರ್ ಸಿಂಗ್ ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಚಾಲಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೊದಲ ಟ್ಯಾಂಕರ್ (MP-09 HH-1908) ನಲ್ಲಿ 30,000 ಲೀಟರ್ ‘Denatured rectified spirit’ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಎರಡನೇ ಟ್ಯಾಂಕರ್ (KA-48 A-2218) ನಲ್ಲಿ 20,000 ಲೀಟರ್ ‘Ethanol’ ಸಾಗಿಸಲಾಗುತ್ತಿದೆ ಎಂದು ನಕಲಿ ದಾಖಲೆಗಳನ್ನು ತೋರಿಸಲಾಗಿತ್ತು.ಸಂಶಯಗೊಂಡ ಅಧಿಕಾರಿಗಳು ಪ್ರೈಮರಿ ಡಿಸ್ಟಿಲರಿಯ ಕೆಮಿಸ್ಟ್‌ರನ್ನು ಸ್ಥಳಕ್ಕೆ ಕರೆಸಿ ಆಲ್ಕೋ ಮೀಟರ್ ಮೂಲಕ ಪರೀಕ್ಷಿಸಿದಾಗ, ಅದು ಮದ್ಯ ತಯಾರಿಕೆಗೆ ಬಳಸುವ ‘Extra Neutral Alcohol’ ಎಂಬುದನ್ನು ಖಚಿತಪಡಿಸಿಕೊಂಡು ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಆಯುಕ್ತರಾದ ಎ.ಎಲ್. ನಾಗೇಶ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಅಮಾನುಲ್ಲಾ ಖಾನ್ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕರು ಹಾಗೂ ದಾಂಡೇಲಿ ವಲಯದ ಅಬಕಾರಿ ನಿರೀಕ್ಷಕರು ಈ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಹೆಚ್ಚಿನ  ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *