Spread the love

ಯಲ್ಲಾಪುರ: ತಾಲೂಕಿನ ತಾಳೆಕುಂಬ್ರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿಗೆ ದಿಢೀರ್ ಬೆಂಕಿ ತಗಿ ಚಾಲಕ ಸಜೀವ ದಹನಗೊಂಡಿರುವ ದುರ್ಘಟನೆ ಬುಧವಾರ ನಡೆದಿದೆ. ಮೃತ ವ್ಯಕ್ತಿ ಬೆಳಗಾವಿ ಮೂಲದ ನಿತೇಶ್ ಧಾಪಳೆ (35) ಆಗಿರುವ ಶಂಕೆ ವ್ಯಕ್ತವಾಗಿದ್ದು, ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ (ಏಪ್ರಿಲ್ 8) ಬೆಳಗಿನ ಜಾವ 5ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಈ ಅಪಘಾತ ಸಂಭವಿಸಿದೆ. ಯಲ್ಲಾಪುರ ಕಡೆಯಿಂದ ಕಾರವಾರದತ್ತ ತೆರಳುತ್ತಿದ್ದ ಕೆಎ-04/ಎಂ.ಜೆ-8986 ಸಂಖ್ಯೆಯ ಕಾರು ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ತಾಳೆಕುಂಬ್ರಿ ಬಸ್ ನಿಲ್ದಾಣದ ಎದುರು ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿಗೆ ಇಳಿದಿದೆ. ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡು, ಒಳಗಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲಾಗದೆ ಬೆಂಕಿಗಾಹುತಿಯಾಗಿದ್ದಾನೆ.

ಬೆಂಕಿಯ ರಭಸಕ್ಕೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಾರಿನೊಳಗಿದ್ದ ವ್ಯಕ್ತಿಯ ದೇಹವೂ ಗುರುತಿಸಲಾಗದಷ್ಟು ಸುಟ್ಟು ಹೋಗಿದೆ. ಸ್ಥಳದಲ್ಲಿ ಕೇವಲ ಮೂಳೆ ಅವಶೇಷಗಳು ಮಾತ್ರ ಪತ್ತೆಯಾಗಿದ್ದು, ಮೃತರ ಗುರುತು ಪತ್ತೆ ಕಾರ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯ ನಿವಾಸಿ, ನಿವೃತ್ತ ನೌಕರ ಜಗನ್ನಾಥ ರಾಹು ಧಾಪಳೆ (65) ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಸುಟ್ಟು ಕರಕಲಾದ ಕಾರಿನಲ್ಲಿ ಇದ್ದದ್ದು ನನ್ನ ಪುತ್ರ ನಿತೇಶ್ ಆಗಿರಬಹುದು ಅಥವಾ ಬೇರೆ ಯಾರಾದರೂ ಆಗಿರಬಹುದು. ದೇಹ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ. ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

ಜಗನ್ನಾಥ ಧಾಪಳೆ ಅವರ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್-2023ರ ಕಲಂ 281 ಹಾಗೂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಗಂಭೀರ ಅಪಘಾತದ ಹಿನ್ನೆಲೆ ಗುರುವಾರ ತಾಳೆಕುಂಬ್ರಿ ಬಳಿಯ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಸ್ವತಃ ಭೇಟಿ ನೀಡಿ, ಸುಟ್ಟು ಕರಕಲಾದ ಕಾರು ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಿದರು. ತನಿಖಾಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ, ಪ್ರಕರಣವನ್ನು ತ್ವರಿತವಾಗಿ ಹಾಗೂ ಸಮಗ್ರವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *