ಶಿರಸಿ: ಶಿರಸಿಯ ನ್ಯಾಯಾಲಯದ ಆವರಣದಲ್ಲಿಯೇ ವಕೀಲೆಯೊಬ್ಬರ ವಾಹನವನ್ನು ದುಷ್ಕರ್ಮಿಗಳು ಜಖಂಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಬೆಚ್ಚಿಬಿದ್ದಿರುವ ನ್ಯಾಯವಾದಿ, ತಮ್ಮ ಜೀವ ಹಾಗೂ ವೃತ್ತಿಜೀವನಕ್ಕೆ ಅಪಾಯವಿದೆಯೆಂದು ಆತಂಕ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅತಿ ಹೆಚ್ಚು ಭದ್ರತೆ ಇರಬೇಕಾದ ಕೋರ್ಟ್ ಆವರಣದಲ್ಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರು ಹಾಗೂ ವಕೀಲರ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಶಿರಸಿಯ ನ್ಯಾಯವಾದಿ ಸವಿತಾ ದೀಪಕ್ ಐತಾಳ ಅವರು ಮಾರ್ಚ್ 25 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತಮ್ಮ ಮಹೀಂದ್ರ ಥಾರ್ ವಾಹನದಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕೋರ್ಟ್ ಆವರಣದಲ್ಲಿಯೇ ಕಾರು ನಿಲ್ಲಿಸಿ ತಮ್ಮ ನಿತ್ಯದ ವೃತ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ವಾಪಸ್ ಬಂದು ನೋಡಿದಾಗ, ದುಷ್ಕರ್ಮಿಗಳು ವಾಹನದ ಎಡಭಾಗದ ಬಾಗಿಲಿನ ಮೇಲೆ ಯಾವುದೋ ಚೂಪಾದ ವಸ್ತುವಿನಿಂದ ಉದ್ದೇಶಪೂರ್ವಕವಾಗಿ ಗೀಚಿ ಹಾನಿ ಮಾಡಿರುವುದು ಬೆಳಕಿಗೆ ಬಂದಿದೆ.
ವಾಹನವನ್ನೇ ಗುರಿಯಾಗಿಸಿಕೊಂಡು ನಡೆಸಿರುವ ಈ ಕೃತ್ಯದ ಹಿಂದೆ ಯಾವುದಾದರೂ ವ್ಯವಸ್ಥಿತ ಸಂಚು ಅಡಗಿದೆಯೇ ಎಂಬ ಅನುಮಾನಗಳು ಮೂಡಿವೆ. ಈ ಘಟನೆಯಿಂದ ಭಯಭೀತರಾಗಿರುವ ಸವಿತಾ ಅವರು, ಮುಂದಿನ ದಿನಗಳಲ್ಲಿ ತಮ್ಮ ಜೀವಕ್ಕೆ ಹಾಗೂ ವೃತ್ತಿ ಬದುಕಿಗೆ ಕುತ್ತು ಬರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕಲಂ 324(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಆವರಣದಲ್ಲಿನ ಭದ್ರತಾ ಲೋಪದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
