ಶಿರಸಿ: ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿ ವಿಪರೀತ ಮದ್ಯವ್ಯಸನಿಯಾಗಿದ್ದ ಕೃಷಿ ಕಾರ್ಮಿಕನೊಬ್ಬ ಆಯತಪ್ಪಿ ಕಾಲು ಜಾರಿ 20 ಅಡಿ ಆಳದ ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯತ್ ವ್ಯಾಪ್ತಿಯ ಊರುತೋಟ ಗ್ರಾಮದಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಮಳಲಿ (ಪೋಸ್ಟ್ ನೆಗ್ಗು) ನಿವಾಸಿ ಪರಮಾ ಈರಾ ಗೌಡ (62) ಮೃತಪಟ್ಟ ದುರ್ದೈವಿ. ಇವರು ಊರುತೋಟ ಗ್ರಾಮದ ಸುಬ್ರಾಯ ಗಣೇಶ ಹೆಗಡೆ ಎಂಬುವವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ತೋಟದ ಮೇಲಿದ್ದ ಪಂಪ್ಸೆಟ್ ಶೆಡ್ನಲ್ಲಿ ವಾಸವಿದ್ದರು.
ಐದು ವರ್ಷಗಳ ಹಿಂದೆ ಪರಮಾ ಅವರ ಮಗ ಮಹೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಮಗನ ಸಾವಿನಿಂದ ತೀವ್ರ ಮನನೊಂದಿದ್ದ ಪರಮಾ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಅಂದಿನಿಂದ ವಿಪರೀತ ಮದ್ಯಸೇವನೆ (ಸಾರಾಯಿ) ಮಾಡಲು ಆರಂಭಿಸಿದ್ದರು. ಸರಿಯಾಗಿ ಊಟ-ತಿಂಡಿಯನ್ನೂ ಮಾಡದೆ ಕೇವಲ ಮದ್ಯದ ದಾಸರಾಗಿದ್ದರು ಎನ್ನಲಾಗಿದೆ.
ಏಪ್ರಿಲ್ 15ರ ಬೆಳಿಗ್ಗೆ 9:30 ರಿಂದ ಏಪ್ರಿಲ್ 17ರ (ಶುಕ್ರವಾರ) ಬೆಳಿಗ್ಗೆ 11:00 ಗಂಟೆಯ ನಡುವಿನ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ. ವಿಪರೀತ ಮದ್ಯದ ಅಮಲಿನಲ್ಲಿದ್ದ ಪರಮಾ ಅವರು ಪಂಪ್ಸೆಟ್ ಶೆಡ್ನ ಮುಂದುಗಡೆ ಇದ್ದ ಮಣ್ಣಿನ ಧರೆಯ ಇಳಿಜಾರಿನಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಾತ್ ಆಯತಪ್ಪಿ ಕಾಲು ಜಾರಿದ್ದಾರೆ. ಪರಿಣಾಮವಾಗಿ, ಸುಮಾರು 20 ಅಡಿ ಆಳದ ನೀರಿಲ್ಲದ (ಒಣಗಿದ) ಕೆರೆಗೆ ಬಿದ್ದಿದ್ದಾರೆ. ಈ ವೇಳೆ, ಕೆರೆಯ ಧರೆಯಲ್ಲಿದ್ದ ಮರದ ಕೊಂಬೆಗಳ ಮಧ್ಯೆ ಸಿಲುಕಿಕೊಂಡು ಪರಮಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಕುರಿತು ಮೃತರ ಸಂಬಂಧಿ (ಅಣ್ಣನ ಮಗ) ಗಣಪತಿ ಈಶ್ವರ ಗೌಡ (44) ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಚಿಕ್ಕಪ್ಪನ ಸಾವಿನಲ್ಲಿ ತಮಗೆ ಬೇರೆ ಯಾವುದೇ ಅನುಮಾನವಿಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ದೂರಿನ ಆಧಾರದ ಮೇಲೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
