ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಎರಡನೇ ವಿವಾಹಕ್ಕೆ ಸಿದ್ಧರಾಗಿದ್ದ ಆಯುರ್ವೇದ ವೈದ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 52 ವರ್ಷದ ಡಾ. ರಮೇಶ್ ಫಕೀರಪ್ಪ ಕಲ್ಗುಟ್ಕರ್ ಮೃತಪಟ್ಟ ದುರ್ದೈವಿಯಾಗಿದ್ದು, ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮದುವೆ ಮನೆಯಲ್ಲಿ ನಡೆಯಬೇಕಿದ್ದ ಸಂಭ್ರಮವು ಕ್ಷಣಮಾತ್ರದಲ್ಲಿ ಸೂತಕದ ಛಾಯೆಯಾಗಿ ಮಾರ್ಪಟ್ಟಿದೆ.
ಮೃತ ಡಾ. ರಮೇಶ್ ಅವರ ಮೊದಲ ಪತ್ನಿ ಕೇವಲ 5 ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಇವರ ಇಬ್ಬರು ಮಕ್ಕಳು ಬೇರೆ ಊರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ, ತಮ್ಮ ಒಂಟಿತನ ನೀಗಿಸಲು ಹಾಗೂ ಭವಿಷ್ಯದ ಆರೈಕೆಯ ದೃಷ್ಟಿಯಿಂದ ಅವರು ಇಂದು (ಏಪ್ರಿಲ್ 20) ಎರಡನೇ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ಮದುವೆಯ ಹಿಂದಿನ ದಿನ ರಾತ್ರಿ ಅವರು ಮನೆಯಲ್ಲಿದ್ದಾಗಲೇ ಈ ಭೀಕರ ಕೃತ್ಯ ನಡೆದಿದೆ. ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಆಗಮಿಸಿದ್ದ ಅವರ ಅಕ್ಕ, ಡಾ. ರಮೇಶ್ ಅವರಿಗೆ ಕರೆ ಮಾಡಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಸಂಜೆ ಮನೆಗೆ ಹೋಗಿ ನೋಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ತಕ್ಷಣವೇ ಈ ಬಗ್ಗೆ ಅವರ ಸಂಬಂಧಿ 63 ವರ್ಷದ ಈರಪ್ಪ ಫಕೀರಪ್ಪ ಕಲ್ಗುಟ್ಕರ್ ಅವರು ರಾತ್ರಿ 9:00 ಗಂಟೆ ಸುಮಾರಿಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೋ ಭಾರವಾದ ಆಯುಧದಿಂದ ತಲೆಗೆ ಬಲವಾಗಿ ಹೊಡೆದು ವೈದ್ಯರನ್ನು ಹತ್ಯೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರ ಜೊತೆಗೆ, ಮದುವೆಗಾಗಿ ತಂದು ಮನೆಯಲ್ಲಿ ಇಟ್ಟಿದ್ದ ಬೆಲೆಬಾಳುವ ಚಿನ್ನಾಭರಣಗಳು ಕೂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಸಿಕ್ಕ ಆರೋಪಿಯು ಮೃತರ ಸಂಬಂಧಿಯಲ್ಲ, ಬದಲಾಗಿ ಇತ್ತೀಚೆಗಷ್ಟೇ ಅವರಿಗೆ ಪರಿಚಯವಾಗಿದ್ದ ವ್ಯಕ್ತಿ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿ ಹಾಗೂ ಮೃತರ ನಡುವಿನ ಪರಿಚಯ ಹೇಗಿತ್ತು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಕುಟುಂಬದವರ ವಿಚಾರಣೆ ಹಾಗೂ ಸಂಪೂರ್ಣ ತನಿಖೆ ಪೂರ್ಣಗೊಂಡ ನಂತರವಷ್ಟೇ ಕೊಲೆಯ ಹಿಂದಿನ ನಿಖರ ಕಾರಣ ಹಾಗೂ ಉದ್ದೇಶ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
