Spread the love

​ಶಿರಸಿ: ನಗರದ ಕೆಎಚ್‌ಬಿ ಕಾಲೋನಿಯ ಹೊಸ ಬಡಾವಣೆಯಲ್ಲಿ ವಾಸವಿದ್ದ ಆಯುರ್ವೇದ ವೈದ್ಯರೊಬ್ಬರನ್ನು ಬರ್ಬರವಾಗಿ ಕೊ*ಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಹ*ತ್ಯೆಯಾದವರನ್ನು ನಗರದ ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದ ಡಾ. ರಮೇಶ ಎಫ್.ಕಲ್ಗುಟ್ಕರ್ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸಂಬಂಧಿಕರು ಅವರ ಮನೆಗೆ ಭೇಟಿ ನೀಡಿದಾಗ ವೈದ್ಯರು ಶ*ವವಾಗಿ ಬಿದ್ದಿರುವುದು ಕಂಡುಬಂದಿದ್ದು, ಈ ಕೃತ್ಯವು ತೀವ್ರ ಸಂಚಲನ ಹಾಗೂ ಆತಂಕ ಸೃಷ್ಟಿಸಿದೆ.

​ಡಾ. ರಮೇಶ ಕಲ್ಗುಟ್ಕರ್ ಅವರ ಪತ್ನಿ ಕೇವಲ ಆರು ತಿಂಗಳ ಹಿಂದಷ್ಟೇ ಮೃ*ತಪಟ್ಟಿದ್ದರು. ಮೂಲಗಳ ಪ್ರಕಾರ, ವೈದ್ಯರು ಇದೀಗ ಎರಡನೇ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ನಾಳೆ (ಸೋಮವಾರ) ತಾಲೂಕಿನ ಪ್ರಸಿದ್ಧ ಮಂಜುಗುಣಿ ಕ್ಷೇತ್ರದಲ್ಲಿ ಅವರ ವಿವಾಹ ನಿಗದಿಯಾಗಿತ್ತು ಎಂಬ ಮಾಹಿತಿ ಕೇಳಿಬರುತ್ತಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ, ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಈ ಭೀಕರ ಹ*ತ್ಯೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ಘಟನೆಯ ವಿಷಯ ತಿಳಿದ ತಕ್ಷಣ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹ*ತ್ಯೆಗೆ ನಿಖರವಾದ ಕಾರಣವೇನು, ಇದರ ಹಿಂದೆ ವೈಯಕ್ತಿಕ ದ್ವೇಷವಿದೆಯೇ ಅಥವಾ ಬೇರಾವುದೇ ಉದ್ದೇಶವಿದೆಯೇ ಎಂಬುದು ಸಮಗ್ರ ಪೊಲೀಸ್ ತನಿಖೆಯಿಂದಷ್ಟೇ ಬಯಲಾಗಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *