ಶಿರಸಿ: ತಾಲೂಕಿನ ಹುಲೆಕಲ್ ವಲಯದ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಕಾಡುಕೋಣಗಳನ್ನು ಬೇಟೆಯಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವನ್ಯಜೀವಿಗಳ ಸಂರಕ್ಷಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಅಧಿಕಾರಿಗಳ ತಂಡ, ಕಾಡುಕೋಣವನ್ನು ಬೇಟೆಯಾಡಿ ಮಾಂಸಕ್ಕಾಗಿ ಬಳಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಪರಾರಿಯಾಗಿರುವ ಉಳಿದ 4 ಮಂದಿ ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸೋದೆಪೇಟೆ ನಿವಾಸಿಯಾಗಿರುವ 44 ವರ್ಷದ ಅಬ್ದುಲ್ ಸಲೀಮ್ ಅಬ್ದುಲ್ ರಬ್ಬು ಸಾಬ್ ಬಂಧಿತ ಆರೋಪಿಯಾಗಿದ್ದಾನೆ. ಇದೇ ಗ್ರಾಮದ ನಿವಾಸಿಗಳಾದ ಹಸನ್ ಮೌಲಾಲಿ ಬೆಣ್ಣೆಸಾಬ, ಹನ್ನಾನ ಅಬ್ದುಲ್ ರಬ್ಬುಸಾಬ, ಸಲಿಂ ಉಸ್ಮಾನಸಾಬ ಹಾಗೂ ಅಬ್ದುಲ್ ಕರಿಂ ಎಂಬುವವರು ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ದಾಳಿ ಮಾಡುತ್ತಿದ್ದಂತೆಯೇ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಕಾಡುಕೋಣದ ಮಾಂಸದ ಅವಶೇಷಗಳು, ಮಾಂಸದ ತುಣುಕುಗಳು ಹಾಗೂ ಅದನ್ನು ಸಾಗಿಸಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹುಲೆಕಲ್ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣವನ್ನು ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ತಂಡವು ಈ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಹಿಂದೂರಾವ್ ಸೂರ್ಯವಂಶಿ ಹಾಗೂ ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹುಲೇಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ಎಸ್.ನಿಂಗಾಣಿ ಅವರ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳಿಗೆ ಹಾನಿ ಮಾಡುವ ಕಟುಕರಿಗೆ ಕಟ್ಟುನಿಟ್ಟಿನ ಕಾನೂನು ಕ್ರಮದ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿದೆ.
