Spread the love

ಶಿರಸಿ: ನಗರದ ಯೂನಿಯನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಝಾ ಖಾನಮ್ ಅವರ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶದಲ್ಲಿ ಉಂಟಾಗಿದ್ದ ಅಂಕಪಟ್ಟಿಯ ಗೊಂದಲ ಕೊನೆಗೂ ಸುಖಾಂತ್ಯ ಕಂಡಿದೆ. ಪರೀಕ್ಷಾ ಮಂಡಳಿಯು ಕೇವಲ ಒಂದೇ ದಿನದಲ್ಲಿ ದೋಷವನ್ನು ಸರಿಪಡಿಸಿ ಹೊಸ ಅಂಕಪಟ್ಟಿಯನ್ನು ಪ್ರಕಟಿಸುವ ಮೂಲಕ, ಆತಂಕಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ತ್ವರಿತವಾಗಿ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ.

ಗುರುವಾರ ಪ್ರಕಟವಾಗಿದ್ದ ಫಲಿತಾಂಶದಲ್ಲಿ ಲಿಝಾ ಅವರು ‘ಸಮಾಜ ವಿಜ್ಞಾನ’ ಪರೀಕ್ಷೆಗೆ ಗೈರಾಗಿದ್ದಾರೆ (Absent) ಎಂದು ಅಂಕಪಟ್ಟಿಯಲ್ಲಿ ನಮೂದಾಗಿತ್ತು. ಪರೀಕ್ಷೆ ಬರೆದಿದ್ದರೂ ಗೈರು ಎಂದು ಬಂದಿದ್ದರಿಂದ ಲಿಝಾ ಹಾಗೂ ಅವರ ಪೋಷಕರು ತೀವ್ರ ಗೊಂದಲ ಮತ್ತು ಆತಂಕಕ್ಕೊಳಗಾಗಿದ್ದರು. ತಕ್ಷಣವೇ ಎಚ್ಚೆತ್ತ ಅವರು, ಈ ದೋಷವನ್ನು ಸರಿಪಡಿಸುವಂತೆ ಶಿರಸಿ ಶಾಸಕ ಭೀಮಣ್ಣ ಟಿ. ನಾಯ್ಕ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ವಿದ್ಯಾರ್ಥಿನಿಯ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು, ನೇರವಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ ಅಂಕಪಟ್ಟಿಯಲ್ಲಿನ ಗೊಂದಲವನ್ನು ತ್ವರಿತವಾಗಿ ಬಗೆಹರಿಸುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ: 👉ಕಣ್ಣಿಲ್ಲದ ವಿದ್ಯಾರ್ಥಿನಿಗೆ ಶಿಕ್ಷಣ ಇಲಾಖೆಯ ಕಣ್ಣುಮುಚ್ಚಾಲೆ: ಪರೀಕ್ಷೆ ಬರೆದರೂ ‘ಗೈರು’ ಎಂದು ಅಂಕಪಟ್ಟಿ, ಘೋರ ಅನ್ಯಾಯ!

ಶಾಸಕರ ಈ ತ್ವರಿತ ಮಧ್ಯಪ್ರವೇಶದ ಫಲವಾಗಿ, ಪರೀಕ್ಷಾ ಮಂಡಳಿಯು ಲಿಝಾ ಅವರ ಅಂಕಪಟ್ಟಿಯಲ್ಲಿದ್ದ ದೋಷವನ್ನು ಸರಿಪಡಿಸಿ ಪರಿಷ್ಕೃತ ಫಲಿತಾಂಶವನ್ನು ಮರಳಿ ಅಪ್‌ಲೋಡ್ ಮಾಡಿದೆ. ಶಿಕ್ಷಣ ಇಲಾಖೆಯ ಈ ತ್ವರಿತ ಕ್ರಮದಿಂದಾಗಿ ವಿದ್ಯಾರ್ಥಿನಿ ಲಿಝಾ ಮತ್ತು ಅವರ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಡಿಡಿಪಿಐ ಡಿ.ಆರ್. ನಾಯ್ಕ ಹಾಗೂ ಬಿಇಒ ನಾಗರಾಜ ನಾಯ್ಕ ಅವರು ಕೂಡ ವಿದ್ಯಾರ್ಥಿನಿಯ ಹಿತದೃಷ್ಟಿಯಿಂದ ಶಾಸಕರು ತೋರಿದ ಕಾಳಜಿ ಹಾಗೂ ಸ್ಪಂದನೆಯನ್ನು ಸ್ಮರಿಸಿ ಶ್ಲಾಘಿಸಿದ್ದಾರೆ.

ಪರಿಷ್ಕೃತ ಅಂಕಪಟ್ಟಿಯ ವಿವರ: ದೋಷ ಸರಿಪಡಿಸಿದ ಬಳಿಕ ಲಿಝಾ ಅವರು ಶೇ. 96.48 ರಷ್ಟು ಅತ್ಯುತ್ತಮ ಅಂಕಗಳನ್ನು ಗಳಿಸಿರುವುದು ದೃಢಪಟ್ಟಿದೆ. ಅವರು ಪಡೆದ ವಿಷಯವಾರು ಅಂಕಗಳ ವಿವರ ಈ ಕೆಳಗಿನಂತಿದೆ:

  • ಕನ್ನಡ: 100
  • ಉರ್ದು: 124
  • ಇಂಗ್ಲಿಷ್: 92
  • ಅರ್ಥಶಾಸ್ತ್ರ: 98
  • ರಾಜ್ಯಶಾಸ್ತ್ರ: 92
  • ಸಮಾಜ ಶಾಸ್ತ್ರ: 97

Leave a Reply

Your email address will not be published. Required fields are marked *