ಕುಮಟಾ: ತಾಲೂಕಿನ ದೇವಿಮನೆ ಘಟ್ಟದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಕಳೆದ ಏಪ್ರಿಲ್ 17 ರಂದು ಮಧ್ಯರಾತ್ರಿ ಸುಮಾರು 12:45 ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 766(ಇ) ರ ದೇವಿಮನೆ ಘಟ್ಟದ ಎರಡನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಆರೋಪಿ ಚಾಲಕ ವೆಂಕಟ್ರಮಣ ಮುಕ್ರಿ (38) ಎಂಬಾತ ತಾನು ಚಲಾಯಿಸುತ್ತಿದ್ದ 407 ಗೂಡ್ಸ್ ವಾಹನವನ್ನು (ಕೆಎ-31/ಎ-3040) ಶಿರಸಿ ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಅತಿ ವೇಗದ ಪರಿಣಾಮವಾಗಿ ಘಟ್ಟದ ತಿರುವಿನಲ್ಲಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರಿಂದ, ವಾಹನವು ರಸ್ತೆಯ ಬಲಬದಿಯ ತಗ್ಗಿಗೆ ಉರುಳಿ ಬಿದ್ದು ಪಲ್ಟಿಯಾಗಿತ್ತು.
ಈ ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ ಮಂಕಿ ಸಮೀಪದ ದೊಡ್ಡಹಿತ್ತಲು ನಿವಾಸಿ ವಿಘ್ನೇಶ್ವರ ನಾಯ್ಕ (34) ಅವರ ತಲೆ ಹಾಗೂ ಎಡಕೈಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸತತ 15 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ವಿಘ್ನೇಶ್ವರ ಅವರು, ಮೇ 2 ರಂದು ಸಂಜೆ 5:57 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಂಕಿ ಹಳೇಮಠ ನಿವಾಸಿ ಚಂದ್ರಶೇಖರ ನಾಯ್ಕ (33) ಅವರು ನೀಡಿದ ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಗಾಯಾಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಮೂಲ ಪ್ರಕರಣಕ್ಕೆ ಕಲಂ 106(1) ಅನ್ನು ಸೇರ್ಪಡೆಗೊಳಿಸಿರುವ ಪೊಲೀಸರು, ಮುಂದಿನ ಕಾನೂನು ತನಿಖೆಯನ್ನು ಮುಂದುವರಿಸಿದ್ದಾರೆ.
