ಜೋಯಿಡಾ: ಜಿಲ್ಲೆಯ ಜೋಯಿಡಾ ತಾಲೂಕಿನ ಚಾಪೋಲಿ ಗೌಳಿವಾಡದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದ್ದು, ಕೇವಲ 13 ವರ್ಷದ ಶಾಲಾ ಬಾಲಕಿಯೊಬ್ಬಳು ದಿಢೀರ್ ಹೃದಯಾಘಾತಕ್ಕೆ (Heart Attack) ಬಲಿಯಾಗಿದ್ದಾಳೆ.
ಮೃ*ತ ದುರ್ದೈವಿಯನ್ನು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗಂಗುಕವಳಿ (13) ಎಂದು ಗುರುತಿಸಲಾಗಿದೆ. ಎಳೆಯ ವಯಸ್ಸಿನ ಮುಗ್ಧ ಬಾಲಕಿಯ ಅನಿರೀಕ್ಷಿತ ಸಾ*ವಿನಿಂದಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಹಾಗೂ ದುಃಖದ ವಾತಾವರಣ ನಿರ್ಮಾಣವಾಗಿದೆ.
ಕುಟುಂಬಸ್ಥರು ಹಾಗೂ ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಮೃತ ವಿದ್ಯಾರ್ಥಿನಿಗೆ ಯಾವುದೇ ರೀತಿಯ ಕಾಯಿಲೆಗಳು ಇರಲಿಲ್ಲ. ಈ ಹಿಂದೆಯೂ ಆಕೆಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳು (Heart issues) ಕಾಡಿದ ಬಗ್ಗೆ ವರದಿಯಾಗಿಲ್ಲ.
ಗಂಗುಕವಳಿ ಇತರ ಎಲ್ಲಾ ಮಕ್ಕಳಂತೆ ಪ್ರತಿದಿನ ಆಟ-ಪಾಠಗಳಲ್ಲಿ ಅತ್ಯಂತ ಲವಲವಿಕೆಯಿಂದ ತೊಡಗಿಕೊಳ್ಳುತ್ತಿದ್ದಳು. ಸಾ*ವಿಗೂ ಹಿಂದಿನ ದಿನ ಸಂಜೆಯವರೆಗೂ ಗೆಳೆಯರೊಂದಿಗೆ ಆಟವಾಡಿ ಮನೆಯವರೊಂದಿಗೆ ಸಂತೋಷದಿಂದಿದ್ದಳು. ಆದರೆ, ಮರುದಿನ ಬೆಳಿಗ್ಗೆ ಆಕೆಗೆ ಏಕಾಏಕಿ ವಾಂತಿಯಾಗಿದೆ. ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ.
ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೆ ಸದಾ ಲವಲವಿಕೆಯಿಂದಿದ್ದ 13 ವರ್ಷದ ಬಾಲಕಿಗೆ ದಿಢೀರ್ ಹೃದಯಾಘಾತವಾಗಿರುವುದು ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ತೀವ್ರ ಆಘಾತ ತಂದಿದೆ.
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್ ಠಾಣೆಯಲ್ಲಿ (Ramanagar Police Station) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ಈ ಅಕಾಲಿಕ ಮರಣಕ್ಕೆ ನಿಖರವಾದ ಕಾರಣ ಏನೆಂದು ತಿಳಿಯಲು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
