Spread the love

ಗೋಕರ್ಣ: ಬೀಗ ಹಾಕಿದ್ದ ಮನೆಯನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಕುಖ್ಯಾತ ಅಂತರ್‌-ರಾಜ್ಯ ಮನೆಗಳ್ಳರ ಜಾಲವೊಂದನ್ನು ಭೇದಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯಾರೋ ಅಪರಿಚಿತ ಕಳ್ಳರು ಮನೆಯೊಂದರ ಬೀಗ ಮುರಿದು ಒಳನುಗ್ಗಿ 66 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಕಲಂ 331(3), 305 ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ ಗೋಕರ್ಣ ಪೊಲೀಸರು, ಮೇಲಾಧಿಕಾರಿಗಳ ಆದೇಶದಂತೆ ವಿಶೇಷ ಪತ್ತೆ ತಂಡವನ್ನು ರಚಿಸಿದ್ದರು. ತಾಂತ್ರಿಕ ಸಾಕ್ಷ್ಯಾಧಾರಗಳು ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ, ಕೃತ್ಯವೆಸಗಿದ್ದ ಆರೋಪಿಗಳನ್ನು ಕೇರಳ ರಾಜ್ಯದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.

ಕೇರಳ ರಾಜ್ಯದ ತ್ರಿಶೂರ್ ಮೂಲದವರಾದ ಸತ್ತೇಶ್ ಕೆ. ಪಿ ಮತ್ತು ಶಿಜು ಎಂ.ಆರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 17 ಲಕ್ಷ ರೂ. ಮೌಲ್ಯದ 66 ಗ್ರಾಂ ಚಿನ್ನಾಭರಣಗಳು ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮೂರು ರಾಜ್ಯಗಳ ವಾಂಟೆಡ್ ಕ್ರಿಮಿನಲ್‌ಗಳು!

ಬಂಧಿತ ಆರೋಪಿಗಳು ಸಾಮಾನ್ಯ ಕಳ್ಳರಲ್ಲ, ಬದಲಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ದರೋಡೆ ಮತ್ತು ಕಳ್ಳತನದಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕ್ರಿಮಿನಲ್‌ಗಳಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಈ ಯಶಸ್ವಿ ಕಾರ್ಯಾಚರಣೆಯು ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್, ಕಾರವಾರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಹಾಗೂ ಭಟ್ಕಳ ಡಿವೈಎಸ್‌ಪಿ ಗಿರೀಶ್ ಬಿ.ವೈ ಅವರ ಮಾರ್ಗದರ್ಶನದಲ್ಲಿ ನಡೆದಿದೆ.

ಕುಮಟಾ ಪಿ.ಐ ಯೋಗೇಶ್ ಕೆ.ಎಮ್ ಮತ್ತು ಗೋಕರ್ಣ ಪಿ.ಐ ಶ್ರೀಧರ ಎಸ್.ಆರ್ ಅವರ ನೇತೃತ್ವದಲ್ಲಿ, ಗೋಕರ್ಣ ಠಾಣೆಯ ಪಿಎಸ್‌ಐ ಅನಿಲ್ ಬಿ.ಎಮ್, ಸಿಬ್ಬಂದಿಗಳಾದ ರಾಜೇಶ್ ಹೆಚ್ ನಾಯ್ಕ, ಶ್ರೀಕಾಂತ್ ಕಟಬರ್, ಪರಮೇಶ್ವರ ಬೆಂಡಗಟ್ಟಿ, ಕಿರಣ್ ಬಾಳೂರ್, ಯಲ್ಲಾಪುರ ಠಾಣೆಯ ಮಹಮ್ಮದ್ ಶಫಿ ಶೇಖ್ ಪಾಲ್ಗೊಂಡಿದ್ದರು. ಜೊತೆಗೆ ಕೊಡಗು ಜಿಲ್ಲೆಯ ಡಿ.ಸಿ.ಆರ್.ಬಿ.ಯ ಯೋಗೇಶ್ ಕುಮಾರ್ ಬಿ, ಜಿಲ್ಲಾ ತಾಂತ್ರಿಕ ವಿಭಾಗದ ಉದಯ ಗುನಗಾ, ಬಬನ್ ಕದಂ ಹಾಗೂ ಮಹಾಲಿಂಗ ಸಾವಳಗಿ ಅವರು ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿ, ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *