Spread the love

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನೂತನ ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಸುಮಾರು 12 ರಿಂದ 13 ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂತಿಮ ಅನುಮೋದನೆಗಾಗಿ ಪಟ್ಟಿಯನ್ನು ಕಳುಹಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ವಿವರಗಳು ಬಹಿರಂಗಗೊಂಡಿವೆ.

ಲಭ್ಯವಾಗಿರುವ ಪಟ್ಟಿಯ ಪ್ರಕಾರ ರಿಜ್ವಾನ್ ಅರ್ಷದ್ ಅವರಿಗೆ ಆಹಾರ ಇಲಾಖೆ, ಚಲುವರಾಯಸ್ವಾಮಿ ಅವರಿಗೆ ಕೃಷಿ ಇಲಾಖೆ ಹಾಗೂ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಅಜಯ್ ಸಿಂಗ್ ಅವರಿಗೆ ಅರಣ್ಯ ಇಲಾಖೆ, ಎಚ್.ಸಿ. ಬಾಲಕೃಷ್ಣ ಅವರಿಗೆ ಸಣ್ಣ ನೀರಾವರಿ ಇಲಾಖೆ ಮತ್ತು ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಿಕ್ಷಣ ಇಲಾಖೆ ಹಂಚಿಕೆಯಾಗಿದೆ.

ಬಸವರಾಜ್ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ, ಜಮೀರ್ ಅಹ್ಮದ್ ಖಾನ್ ಅವರಿಗೆ ವಸತಿ, ಲಕ್ಷ್ಮಣ್ ಸವದಿ ಅವರಿಗೆ ಸಹಕಾರ ಹಾಗೂ ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಇಲಾಖೆ ನೀಡಲಾಗಿದೆ. ಬಸವಂತಪ್ಪ ಅವರಿಗೆ ಮೀನುಗಾರಿಕೆ, ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಗಣಿ ಹಾಗೂ ಪುಟ್ಟರಂಗಶೆಟ್ಟಿ ಅವರಿಗೆ ಪಶುಸಂಗೋಪನಾ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.

ಖಾತೆ ಹಂಚಿಕೆ ವೇಳೆ ಬಹುತೇಕ ಸಚಿವರಿಗೆ ಈ ಹಿಂದೆ ಹೊಂದಿದ್ದ ಅಥವಾ ನಿರೀಕ್ಷಿಸಿದ್ದ ಖಾತೆಗಳನ್ನೇ ನೀಡುವ ತಂತ್ರವನ್ನು ಹೈಕಮಾಂಡ್ ಅನುಸರಿಸಿದೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಹಂಚಿಕೆ ವಿಚಾರದಲ್ಲಿ ಮುನಿಯಪ್ಪ ಹಾಗೂ ಕೆಲ ದಲಿತ ನಾಯಕರ ನಡುವೆ ತಿಕ್ಕಾಟದ ಮಾತುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಈ ಖಾತೆಯನ್ನು ಮುನಿಯಪ್ಪ ಅವರ ಬಳಿಯೇ ಉಳಿಸಿಕೊಳ್ಳಲಾಗಿದೆ.

ಮಾಗಡಿ ಬಾಲಕೃಷ್ಣ ಅವರು ನಿರೀಕ್ಷಿಸಿದ್ದಂತೆ ಸಣ್ಣ ನೀರಾವರಿ ಇಲಾಖೆಯ ಜವಾಬ್ದಾರಿ ಎಚ್.ಸಿ. ಬಾಲಕೃಷ್ಣ ಅವರಿಗೆ ನೀಡಲಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ನಿರೀಕ್ಷೆಯಲ್ಲಿದ್ದ ಪಿ.ಎಂ. ನರೇಂದ್ರಸ್ವಾಮಿ ಹಾಗೂ ನಾಯಕ ನಾಗೇಂದ್ರ ಅವರಿಗೆ ಯಾವ ಖಾತೆ ನೀಡಲಾಗಿದೆ ಎಂಬುದು ಸದ್ಯದ ಪಟ್ಟಿಯಲ್ಲಿ ಸ್ಪಷ್ಟವಾಗಿಲ್ಲ.

ಇದರ ನಡುವೆ ನೂತನ ಸಚಿವರಿಗೆ ವಿಧಾನಮಂಡಲ ಅಧಿವೇಶನ ಎದುರಿಸುವ ಸವಾಲು ಕೂಡ ಎದುರಾಗಿದೆ. ಮಳೆಗಾಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಹೊಸ ಸಚಿವರಿಗೆ ತಮ್ಮ ಇಲಾಖೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಕೇವಲ 3 ರಿಂದ 4 ದಿನಗಳಷ್ಟೇ ಕಾಲಾವಕಾಶ ಸಿಗಲಿದೆ.

ಅಧಿವೇಶನದ ಆರಂಭಿಕ ದಿನ ಸಂತಾಪ ಸೂಚನೆ ಚರ್ಚೆ ಹಾಗೂ ಬಳಿಕ ಸಭಾಧ್ಯಕ್ಷರ ಚುನಾವಣೆ ನಡೆಯಲಿದೆ. ಸೋಮವಾರದಿಂದ ಪ್ರಶ್ನೋತ್ತರ ಹಾಗೂ ಗಮನಸೆಳೆಯುವ ಸೂಚನೆಗಳು ಆರಂಭವಾಗಲಿದ್ದು, ಹೀಗಾಗಿ ನೂತನ ಸಚಿವರು ತಮ್ಮ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಕಡತಗಳು ಹಾಗೂ ಪ್ರಮುಖ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *