ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನೂತನ ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆಯಲ್ಲಿ ಕೊನೆಕ್ಷಣದಲ್ಲಿ ಭಾರೀ ಬದಲಾವಣೆಗಳು ನಡೆದಿವೆ. ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಕೆಲವು ಹಿರಿಯ ನಾಯಕರನ್ನು ಸಮಾಧಾನಪಡಿಸಲು ಸರ್ಕಾರ ಪ್ರಮುಖ ಹುದ್ದೆಗಳ ಜವಾಬ್ದಾರಿ ನೀಡಿದ್ದು, ಹಲವು ಸಚಿವರ ಖಾತೆಗಳಲ್ಲೂ ದಿಢೀರ್ ಅದಲುಬದಲು ಮಾಡಲಾಗಿದೆ.
ನೂತನ ಖಾತೆ ಹಂಚಿಕೆ ಪಟ್ಟಿಯ ಪ್ರಕಾರ ಶಾಸಕ ಬಿ. ನಾಗೇಂದ್ರ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಕೃಷಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಎಚ್.ಸಿ. ಬಾಲಕೃಷ್ಣ ಅವರಿಗೆ ಪೌರಾಡಳಿತ, ಎನ್. ಚಲುವರಾಯಸ್ವಾಮಿ ಅವರಿಗೆ ಜಲ ಸಂಪನ್ಮೂಲ ಹಾಗೂ ಡಾ. ಅಜಯ್ ಸಿಂಗ್ ಅವರಿಗೆ ಸಣ್ಣ ನೀರಾವರಿ ಇಲಾಖೆ ಹಂಚಿಕೆ ಮಾಡಲಾಗಿದೆ.
ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಅರಣ್ಯ ಇಲಾಖೆ ಹಾಗೂ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಣ್ಣ ಕೈಗಾರಿಕೆ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಕೊನೆಕ್ಷಣದ ಈ ಬದಲಾವಣೆಗಳು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿವೆ.
ಇನ್ನು ಸಚಿವರ ಪಟ್ಟಿಯಲ್ಲಿ ಆರಂಭದಲ್ಲಿ ಹೆಸರು ಕಾಣಿಸಿಕೊಂಡಿದ್ದರೂ ಕೊನೆಕ್ಷಣದಲ್ಲಿ ಸಚಿವ ಸ್ಥಾನದಿಂದ ಕೈಬಿಡಲ್ಪಟ್ಟಿದ್ದ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರಿಗೆ ಇದೀಗ ಮಹತ್ವದ ಜವಾಬ್ದಾರಿ ನೀಡಲು ಕಾಂಗ್ರೆಸ್ ನಾಯಕತ್ವ ಮುಂದಾಗಿದೆ ಎನ್ನಲಾಗಿದೆ. ಮಂಕಾಳ ವೈದ್ಯ ಅವರನ್ನು ವಿಧಾನಸಭೆಯ ಉಪ ಸಭಾಧ್ಯಕ್ಷರನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.
ವಿಧಾನಸಭೆಯ ಸ್ಪೀಕರ್ ಹಾಗೂ ಉಪ ಸಭಾಧ್ಯಕ್ಷರ ಚುನಾವಣೆ ಇದೇ ಆಗಸ್ಟ್ 14ರಂದು ನಡೆಯಲಿದ್ದು, ಮಂಕಾಳ ವೈದ್ಯ ಅವರನ್ನು ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಕೂರಿಸುವ ಮೂಲಕ ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್ ನಾಯಕತ್ವ ಮುಂದಾಗಿದೆ ಎನ್ನಲಾಗಿದೆ.
ಮತ್ತೊಂದೆಡೆ ಸಚಿವ ಸ್ಥಾನ ಸಿಗದಿದ್ದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರಿಗೂ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಅವರನ್ನು ಆಡಳಿತ ಸುಧಾರಣಾ ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದ್ದು, ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ವಿಚಾರದಲ್ಲಿ ಉತ್ತರ ಕನ್ನಡ ಸೇರಿದಂತೆ ಹಲವು ಭಾಗಗಳಲ್ಲಿ ಮೂಡಿದ್ದ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್ ನಾಯಕತ್ವ ಕೊನೆಕ್ಷಣದಲ್ಲಿ ಈ ರೀತಿಯ ರಾಜಕೀಯ ಹೊಂದಾಣಿಕೆಯ ಸೂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ. ದೇಶಪಾಂಡೆ ಅವರಿಗೆ ಕ್ಯಾಬಿನೆಟ್ ದರ್ಜೆ ಹಾಗೂ ಮಂಕಾಳ ವೈದ್ಯ ಅವರಿಗೆ ಉಪ ಸಭಾಧ್ಯಕ್ಷ ಸ್ಥಾನ ನೀಡುವ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
