ದಾಂಡೇಲಿ: ತಾಲೂಕಿನ ಹಸನ್ಮಾಳ ಗ್ರಾಮದಲ್ಲಿರುವ ವೈಲ್ಡರ್ ನೆಸ್ಟ್ ರಿಸಾರ್ಟ್‌ನಲ್ಲಿ ಸೋಮವಾರ ಬೆಳಗಿನ ಜಾವ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಳಗಿನ ಜಾವ ಸುಮಾರು 4 ಗಂಟೆಯ ಹೊತ್ತಿಗೆ ರಿಸಾರ್ಟ್ ಆವರಣದಲ್ಲಿ ಮಲಗಿದ್ದ ಜರ್ಮನ್ ಶೆಫರ್ಡ್ ನಾಯಿಯ ಮೇಲೆ ಬ್ಲ್ಯಾಕ್ ಪ್ಯಾಂಥರ್ (ಕರಿ ಚಿರತೆ) ಏಕಾಏಕಿ ದಾಳಿ ನಡೆಸಿದೆ.
ಈ ಭೀಕರ ದಾಳಿಗೆ ತುತ್ತಾದ ಜರ್ಮನ್ ಶೆಫರ್ಡ್ ನಾಯಿಯು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದೆ. ಮೃತಪಟ್ಟ ನಾಯಿಯು ವೈಲ್ಡರ್ ನೆಸ್ಟ್ ರಿಸಾರ್ಟ್‌ನ ಮಾಲೀಕರಾದ ಅಬ್ದುಲ್ ಕರೀಂ ಖತೀಬ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ರಿಸಾರ್ಟ್ ಆವರಣದಲ್ಲಿ ಮಲಗಿದ್ದ ನಾಯಿಯ ಮೇಲೆ ಬ್ಲ್ಯಾಕ್ ಪ್ಯಾಂಥರ್ ಅತಿ ವೇಗವಾಗಿ ಬಂದು ದಾಳಿ ನಡೆಸಿದ ಭೀಕರ ದೃಶ್ಯಗಳು ರಿಸಾರ್ಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಈ ಘಟನೆಯ ಬಳಿಕ ರಿಸಾರ್ಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಹಸನ್ಮಾಳ ಗ್ರಾಮದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇವಲ ಪ್ರಾಣಿಗಳಷ್ಟೇ ಅಲ್ಲದೆ ಮನುಷ್ಯರ ಮೇಲೂ ದಾಳಿಯಾಗುವ ಭೀತಿ ಎದುರಾಗಿದೆ.
ರಿಸಾರ್ಟ್ ಮತ್ತು ಗ್ರಾಮದ ಸುತ್ತಮುತ್ತ ಕರಿಚಿರತೆ ಓಡಾಡುತ್ತಿರುವುದು ಖಚಿತವಾಗಿರುವುದರಿಂದ, ಅರಣ್ಯ ಇಲಾಖೆಯು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪ್ರಾಣಿ ಹಾನಿ ತಡೆಯಲು ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ತೀವ್ರವಾಗಿ ಒತ್ತಾಯಿಸಿದ್ದಾರೆ.
